ಮಂಗಳೂರು ನಗರದ ನೀರುಮಾರ್ಗದ ಜಂಕ್ಷನ್ ಸಮೀಪದಲ್ಲಿರುವ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರಕ್ಕೆ ನುಗ್ಗಿದ ಇಬ್ಬರು ಕಳ್ಳರು ಕಾಣಿಕೆ ಡಬ್ಬಿ ಕಳವುಗೈದಿರುವ ಘಟನೆ ನಡೆದಿದೆ. ಇದರ ಸಂಪೂರ್ಣ ದೃಶ್ಯ ಭಜನಾ ಮಂದಿರದ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ಭಜನಾ ಮಂದಿರದ ಮುಂಭಾಗಕ್ಕೆ ನಸುಕಿನ ವೇಳೆ 1.45ರ ಸುಮಾರಿಗೆ ಆಗಮಿಸಿದ್ದ ಕಳ್ಳರು ಮುಂಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿದ್ದಾರೆ. ಬಳಿಕ ಉತ್ತರದ ಬಾಗಿಲು ತೆರೆದು ಪ್ರಧಾನ ಗುಡಿಯ ಮುಂಭಾಗದಲ್ಲಿರುವ ಕಾಣಿಕೆ ಡಬ್ಬಿಯನ್ನು ಹೊರಗೆ ಸಾಗಿಸಿದ್ದಾರೆ. ಕೆಲವು ಹೊತ್ತಿನ ಬಳಿಕ ಒಬ್ಬಾತ ಹರಿತವಾದ ಅಸ್ತ್ರವೊಂದರಿಂದ ಗರ್ಭಗುಡಿಯ ಬಾಗಿಲು ಮುರಿದು ಜಾಲಾಡಿದ್ದಾನೆ. ಕಾಣಿಕೆ ಡಬ್ಬಿಯಲ್ಲಿ ಮೂರೂವರೆ ಸಾವಿರ ರೂಪಾಯಿಗೂ ಅಧಿಕ ಕಾಣಿಕೆ ಹಣ ಇತ್ತೆಂದು ತಿಳಿದು ಬಂದಿದೆ.
ಆರೋಪಿಗಳು ನಸುಕಿನ ವೇಳೆ 2.15ರಿಂದ 2.30ರ ಅಂತರದಲ್ಲಿ ಮಂದಿರದೊಳಗೆ ಪ್ರವೇಶಿಸಿ ಕಳವು ಕೃತ್ಯ ನಡೆಸಿದ್ದಾರೆ. ಕಳ್ಳರ ಚಲನವಲನಗಳ ಸುಮಾರು 45 ನಿಮಿಷಗಳ ವೀಡಿಯೋ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಕೃತ್ಯದಲ್ಲಿ ಮೇಲ್ನೋಟಕ್ಕೆ ಇಬ್ಬರು ಶಾಮೀಲಾಗಿರುವುದು ತಿಳಿದು ಬಂದಿದೆ. ಚಪ್ಪಲಿ ಹಾಕಿಕೊಂಡೇ ಭಜನಾ ಮಂದಿರದ ಪ್ರಧಾನ ಗುಡಿ ಪ್ರವೇಶಿಸಿದ್ದಾರೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಇನ್ ಸ್ಪೆಕ್ಟರ್ ಜಾನ್ಸನ್ ಮತ್ತು ಸಿಬ್ಬಂದಿ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ತನಿಖೆ ನಡೆಸಿದ್ದಾರೆ.