ಬೆಂಗಳೂರು: ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಶಾಲಾ-ಕಾಲೇಜುಗಳನ್ನು ಕೆಲವು ದಿನಗಳ ಮಟ್ಟಿಗೆ ಬಂದ್ ಮಾಡುವುದು ಉತ್ತಮ ಎಂದು ಆರೋಗ್ಯ ತಜ್ಞರು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗಿದೆ.
ಕೊರೋನಾ ನಿಯಂತ್ರಣ ಕುರಿತ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ. ಶಾಲೆ-ಕಾಲೇಜು ಬಂದ್ ಮಾಡುವುದಲ್ಲದೆ, ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಸಭೆಯಲ್ಲಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.
ಒಳಾಂಗಣ ಕಾರ್ಯಕ್ರಮಗಳಿಗೆ 100 ಜನರಿಗೆ, ಸಿನಿಮಾ ಮಂದಿರಗಳಲ್ಲಿ ಶೇ. 50 ರಷ್ಟು ಮಾತ್ರ ಭರ್ತಿಗೆ ಅವಕಾಶ ನೀಡಬೇಕು ಎಂದು ತಜ್ಞರು ಪ್ರತಿಪಾದಿಸಿದ್ದಾರೆ. ಆದರೆ ಸಿಎಂ ಯಡಿಯೂರಪ್ಪ ಈಗಾಗಲೇ ಕೊರೋನಾ ಬಗ್ಗೆ ಎಚ್ಚರವಾಗಿರಿ, ಆದರೆ ಯಾವುದೇ ಸಭೆ, ಸಮಾರಂಭಗಳಿಗೆ, ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ನೀಡುವ ಯೋಚನೆಯಿಲ್ಲ. ಕೊರೋನಾ ನಿಯಂತ್ರಣ ಮೀರಿದರೆ ಆಗ ನೋಡೋಣ ಎಂದಿದ್ದರು.