ಬೆಂಗಳೂರು: ಬೆಂಗಳೂರಿಗರು ಹೊಸ ವರ್ಷಾಚರಣೆ ಆಚರಿಸಲು ಸೂಕ್ತವಾದ ಜಾಗ ಹುಡುಕಾಡುತ್ತಿರಬಹುದು. ಹೆಚ್ಚಿನವರಿಗೆ ಇಷ್ಟವಾದ ತಾಣವೆಂದರೆ ನಂದಿಬೆಟ್ಟ.
ಆದರೆ ಹೊಸ ವರ್ಷವನ್ನು ನಂದಿಬೆಟ್ಟದಲ್ಲಿ ಆಚರಿಸಲು ನೀವು ಪ್ಲ್ಯಾನ್ ಮಾಡಿಕೊಂಡಿದ್ದರೆ ನಿಮಗೆ ನಿರಾಸೆಯಾಗಬಹುದು. ಯಾಕೆಂದರೆ ನಂದಿಬೆಟ್ಟ ಹೊಸ ವರ್ಷದಂದು ಪ್ರವಾಸಿಗರಿಗೆ ಬಂದ್ ಆಗಿರಲಿದೆ.
ಡಿಸೆಂಬರ್ 31 ರ ಸಂಜೆ 6 ರಿಂದ ಜನವರಿ 1 ರ ಬೆಳಿಗ್ಗೆ 6 ರವರೆಗೆ ನಂದಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಚಿಕ್ಕಬಳ್ಳಾಪುರ ಡಿಸಿ ಆದೇಶ ಹೊರಡಿಸಿದ್ದಾರೆ. ಹೊಸ ವರ್ಷಾಚರಣೆ ನೆಪದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ಕಳೆದ ವರ್ಷವೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಂದಿಬೆಟ್ಟಕ್ಕೆ ಪ್ರವೇಶ ನಿರಾಕರಿಸಲಾಗಿತ್ತು. ಈ ವರ್ಷವೂ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಪ್ರವೇಶ ನಿರ್ಬಂಧಿಸಿದೆ.