Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ
ಚಿಕ್ಕಮಗಳೂರು , ಶುಕ್ರವಾರ, 16 ಜುಲೈ 2021 (09:04 IST)
Karnataka Rains Today July 16: ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದಾದ್ಯಂತ ಇಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಜು.18ರವರೆಗೆ ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿಯಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿಎಸ್ ಪಾಟೀಲ್ ತಿಳಿಸಿದ್ದಾರೆ.

ಈಗಾಗಲೇ ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ರೆಡ್, ಯೆಲ್ಲೋ ಹಾಗೂ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲೂ ಕೂಡ ಇಂದು ಮತ್ತು ನಾಳೆ ಭಾರೀ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದ್ದು, ಜು. 16ರಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜು.17ರಂದು ಈ ಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಪ್ರದೇಶದ ಮೀನುಗಾರರಿಗೂ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಚಿತ್ರದುರ್ಗ, ದಾವಣಗೆರೆ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಾಧ್ಯತೆ ಇದ್ದು, ಜುಲೈ 18ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಜುಲೈ 16 ಮತ್ತು 17ರಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬುಧವಾರ ಉತ್ತರ ಕನ್ನಡದ ಕದ್ರಾದಲ್ಲಿ 13 ಸೆಂ.ಮೀ ಮಳೆ, ಸುಬ್ರಮಣ್ಯ 10 ಸೆಂ.ಮೀ. ಸುಳ್ಯ, ದ.ಕ. ತಲಾ 9 ಸೆ.ಮೀ. ಮಳೆ ದಾಖಲು ಆಗಿದೆ.
ಬೆಂಗಳೂರಿನಲ್ಲೂ ಕೂಡ ಮುಂದಿನ ಎರಡು ದಿನ ಮಳೆಯಾಗಲಿದ್ದು ಗರಿಷ್ಠ ಉಷ್ಣಾಂಶ 24 ಡಿಗ್ರಿ ಸೆಂಟಿಗ್ರೇಡ್, ಕನಿಷ್ಟ ಉಷ್ಣಾಂಶ 20 ಡಿಗ್ರಿ ಇರಲಿದೆ. ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಜಿಲ್ಲೆಯ ಪ್ರಮುಖ ನದಿಗಳಾದ ಕುಮಾರಧಾರಾ ಮತ್ತು ನೇತ್ರಾವತಿ ತುಂಬಿ ಹರಿಯುತ್ತಿದೆ. ಘಟ್ಟ ಪ್ರದೇಶಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಭಾರೀ ಮಳೆಯಾಗುತ್ತಿದ್ದು, ಘಟ್ಟ ಪ್ರದೇಶಗಳಿಂದ ಹರಿದು ಬರುವ ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ಭಾರೀ ಹೆಚ್ಚಳವಾಗಿದೆ.
ಕಳೆದ ಎರಡು ನಾಲ್ಕು ದಿನಗಳಿಂದ ಕರ್ನಾಟಕ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಅತಿಹೆಚ್ಚು ಮಳೆಯಾಗುತ್ತಿದೆ. ಕಳೆದೊಂದು ವಾರದಿಂದ ಕೊಂಚ ವಿರಾಮ ನೀಡಿದ್ದ ಮಳೆ ಕಳೆದ ಮೂರು ದಿನಗಳಿಂದ ಬಿರುಸು ಕೊಂಡಿದೆ. ಈಗಾಗಲೇ ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಇನ್ನು ಮೂರು ದಿನ ಇದೇ ರೀತಿ ಮಳೆಯಾಗಲಿದೆ. ಅರಬ್ಬಿ ಸಮುದ್ರದಲ್ಲಿ ಏಳುವ ಗಾಳಿಯಿಂದ ಅಲೆಗಳ ಹೊಡೆತ ಇನ್ನಷ್ಟು ಹೆಚ್ಚಲಿದ್ದು, ಕಡಲ ಕೊರೆತ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನಲೆ ಈಗಾಗಲೇ ಈ ಪ್ರದೇಶಗಳಲ್ಲಿ ರೆಡ್ ಆಲರ್ಟ್ ಘೋಷಣೆ ಮಾಡಲಾಗಿದೆ.
ರಾಜ್ಯದಲ್ಲಿ ಈಗಾಗಲೇ ನೈರುತ್ಯ ಮಾನ್ಸೂನ್ನಿಂದಾಗಿ ಉತ್ತಮ ಮಳೆಯಾಗುತ್ತಿದೆ. ಅಲ್ಲದೆ, ಜುಲೈ 18ರವರೆಗೂ ಕರ್ನಾಟಕದಲ್ಲಿ ಅತಿ ಹೆಚ್ಚಿನ ಮಳೆಯಾಗುವುದಾಗಿ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ನೆರೆಯ ಕೇರಳ ಹಾಗೂ ಮಹಾರಾಷ್ಟ್ರ, ತಮಿಳುನಾಡಿನ ನೀಲಗಿರಿಯ ಪಶ್ಚಿಮ ಘಟ್ಟ, ಗುಜರಾತ್ನ ಕೆಲ ಪ್ರದೇಶಗಳಲ್ಲಿ ಕೂಡ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಕರಾವಳಿಯಲ್ಲಿ ಇಂದು ಕೂಡಾ ಭಾರಿ ಮಳೆ ಮುಂದುವರೆದಿದ್ದು, ಮುಂದಿನ ನಾಲ್ಕೈದು ದಿನ ಮಳೆ ಇದೇ ರೀತಿ ಮುಂದುವರಿಯುವ ಸೂಚನೆಯನ್ನು ಹವಾಮಾನ ಇಲಾಖೆ ಈಗಾಗಲೇ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 16 ರಂದು ರೆಡ್ ಅಲರ್ಟ್ ಘೋಷಿಸಲಾಗಿದ್ದು, ಭಾರೀ ಮಳೆಯ ಸಾಧ್ಯತೆಯಿದೆ. ಕಳೆದ ನಾಲ್ಕೈದು ದಿನಗಳಿಂದ ಕರಾವಳಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರಮುಖ ನದಿಗಳಾದ ನೇತ್ರಾವತಿ ಮತ್ತು ಕುಮಾರಧಾರ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.
ನದಿ ನೀರು ತಗ್ಗು ಪ್ರದೇಶಗಳಿಗೆ ನುಗ್ಗುವ ಸಾಧ್ಯತೆಯೂ ಇರುವ ಕಾರಣ ಬಂಟ್ವಾಳ, ಮಂಗಳೂರು ತಾಲೂಕಿನ ನದಿ ಅಂಚಿನಲ್ಲಿರುವ ಮನೆಗಳಿಗೂ ಪ್ರವಾಹದ ಎಚ್ಚರಿಕೆಯನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಮಳೆ ಇನ್ನೂ ನಾಲ್ಕೈದು ದಿನ ಮುಂದುವರಿಯಲಿದ್ದು, ಜುಲೈ 16( ಇಂದು) ಜಿಲ್ಲೆಯಾದ್ಯಂತ ರೆಟ್ ಅಲರ್ಟ್ ಘೋಷಿಸಲಾಗಿದೆ. ಅರಬ್ಬೀ ಸಮುದ್ರದಲ್ಲೂ ಮಳೆಯಿಂದಾಗಿ ಅಲೆಗಳು ಹೆಚ್ಚಾಗುವ ಕಾರಣಕ್ಕಾಗಿ ಮೀನುಗಾರರು ಕಡಲಿಗೆ ಇಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡುವ ಸಾಧ್ಯತೆಯೂ ಹೆಚ್ಚಾಗಿದೆ


Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಗಡಿಗಳಲ್ಲಿ ಶಾಶ್ವತ ಶಿಬಿರ ನಿರ್ಮಿಸುತ್ತಿರುವ ಚೀನಾ!