Publish Date: Tue, 12 Jul 2022 (16:50 IST)
Updated Date: Tue, 12 Jul 2022 (17:52 IST)
ರಾಜ್ಯದ ಮಲೆನಾಡು, ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಸೋಮವಾರವೂ ಮಳೆ ಮುಂದುವರಿದಿದ್ದರೆ, ಕರಾವಳಿ ಜಿಲ್ಲೆಗಳಲ್ಲಿ ತುಸು ಕಡಿಮೆಯಾಗಿದೆ. ಆದರೆ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗುಡ್ಡ ಕುಸಿದಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿದ ಮಾರುತಿ ಕಾರು ಚಿಕ್ಕಮಗಳೂರು ಜಿಲ್ಲೆಯ ಗೌರಿ ಹೊಳೆಗೆ ಉರುಳಿ ಚಾಲಕ ಸೇರಿ ಇಬ್ಬರು ನಾಪತ್ತೆ ಆಗಿದ್ದಾರೆ. ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ 24 ಮನೆಗಳು ಭಾಗಶಃ ಕುಸಿದಿದ್ದರೆ, ಗಡಿ ಜಿಲ್ಲೆ ಬೀದರ್ನಲ್ಲಿ 12 ಮನೆಗಳು ಕುಸಿದಿವೆ.
ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಕಲ್ಮಕ್ಕಿ ಬಳಿ ನೀರೋಡಿ ಹೊಳೆಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆಯ ಮೇಲ್ಭಾಗ ಸಂಪೂರ್ಣ ಕೊಚ್ಚಿ ಹೋಗಿದೆ. ಸೇತುವೆಯು ಕುಸಿಯುವ ಭೀತಿ ಎದುರಾಗಿದ್ದು, ರಸ್ತೆ ಸಂಪರ್ಕ ಕಡಿದುಹೋಗಿದೆ. ಬಂಟ್ವಾಳ ತಾಲ್ಲೂಕಿನ ಸೂರಿಕುಮೇರು ಬಳಿಯೂ ಗುಡ್ಡ ಕುಸಿದಿದ್ದು, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಅರೆನೂರು ಮತ್ತು ಸದಾಶಿವಗಡ ಬಳಿ ಗುಡ್ಡ ಕುಸಿದಿದೆ. ಇದರಿಂದಾಗಿ ಸದಾಶಿವಗಡ-ಬೆಳಗಾವಿ ಸಂಪರ್ಕ ಕಡಿತವಾಗಿದೆ. ಇತ್ತ, ಹಾಸನ ಜಿಲ್ಲೆಯಲ್ಲಿ ದ್ವಾರಸಮುದ್ರ ಕೆರೆಯು ಕೋಡಿ ಬಿದ್ದಿದ್ದು, ಕೊಣನೂರು-ರಾಮನಾಥಪುರ ನಡುವಿನ ಸಂಪರ್ಕ ಬಂದ್ ಆಗಿತ್ತು. ಸಕಲೇಶಪುರ ತಾಲ್ಲೂಕು ದೋಣಿಗಲ್ ಬಳಿ ಸೋಮವಾರವೂ ಹೆದ್ದಾರಿ ಬದಿ ಭೂಕುಸಿತವಾಗಿದ್ದು, ಸಂಚಾರ ಸ್ಥಗಿತವಾಗಿದೆ.
geetha
Publish Date: Tue, 12 Jul 2022 (16:50 IST)
Updated Date: Tue, 12 Jul 2022 (17:52 IST)