ಉಡುಪಿ: ನೊಂದ ಜೀವಗಳ ಕಣ್ಣೀರು ಸುರಿಸುತ್ತಿರುವಾಗ ನಾನು ಯಾವ ಪುರುಷಾರ್ಥಕ್ಕೆ ಪ್ರಶಸ್ತಿ ಸ್ವೀಕರಿಸಲಿ. ಹೀಗಾಗಿ ನಾನು ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಉಡುಪಿಯ ಸಮಾಜಸೇವಕ ಡಾ. ರವೀಂದ್ರನಾಥ ಶಾನುಭಾಗ್ ಹೇಳಿದ್ದಾರೆ.
ನನಗೆ ಸ್ವರ್ಗ ಕೊಟ್ಟರೂ ಬೇಡ. ನನಗೆ ಒಂದು ನ್ಯಾಯ ಕೊಡಿ. ನನ್ನ ಸಮಾಜ ಸೇವೆ ಪೂರ್ತಿಯಾಗಿಲ್ಲ. ಪೂರ್ತಿಯಾಗಲು ಜನಪ್ರತಿನಿಧಿಗಳು ಬಿಡುವುದಿಲ್ಲ. ಓಟು ಬೇಡಿದವರ ಬಳಿ ಜನ ನ್ಯಾಯ ಬೇಡುತ್ತಿದ್ದಾರೆ. ಇಂತಹ ಪರಿಸ್ಥಿತಿ ದೇಶದಲ್ಲಿ, ರಾಜ್ಯದಲ್ಲಿ ಇದೆ ಅನ್ನೋದು ನಾಚಿಕೆಗೇಡಿನ ವಿಚಾರ ಎಂದಿದ್ದಾರೆ.
ಮೂರು ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತ ಮಕ್ಕಳ ನೊಂದಣಿಯಾಗಿಲ್ಲ. ಉಡುಪಿ, ಉತ್ತರ ಕನ್ನಡದಲ್ಲಿ ಡೇ ಕೇರ್ ಸೆಂಟರ್ ಸಹ ನಿರ್ಮಾಣವಾಗಿಲ್ಲ. ಎಂಡೋಸಲ್ಫಾನ್ ಪೀಡಿತರು ಬೀದಿಯಲ್ಲಿ ಭಿಕ್ಷೆ ಬೇಡುತ್ತಿರುವಾಗ ಹಾಗೂ ಹಿರಿಯ ನಾಗರೀಕರು ಪ್ರತಿನಿತ್ಯ ಕಣ್ಣೀರಿಡುತ್ತಿರುವಾಗ ನಾನು ಈ ಪ್ರಶಸ್ತಿ ಸ್ವೀಕರಿಸಿದರೆ ಅವರ ಮುಖದಲ್ಲಿ ನಗು ಕಾಣಲು ಹೇಗೆ ಸಾಧ್ಯ ಎಂದು ಉತ್ತರಿಸಲಾಗದ ಪ್ರಶ್ನೆ ಹಾಕಿದ್ದಾರೆ.