ಕಲಬುರಗಿ : ಕಲಬುರಗಿಯ ಹಳ್ಳಿಖೇಡ್ ಗ್ರಾಮದಲ್ಲಿ ಸೂಲಿಬೆಲೆ ಅವರ ಕಾರ್ಯಕ್ರಮ ನಡೆಸಲು ಹೈಕೋರ್ಟ್ ಅನುಮತಿ ನೀಡಿದ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಸೂಲಿಬೆಲೆ, ರಾಜ್ಯದ 35 ತಾಲೂಕುಗಳಲ್ಲಿ ಆಗದ ಶಾಂತಿಭಂಗ ಚಿತ್ತಾಪುರದಲ್ಲಿ ಮಾತ್ರ ಆಗುತ್ತದೆಯೇ ಎಂದು ಪ್ರಶ್ನಿಸಿದರು. ಸಚಿವರಾಗಿದ್ದೂ ಸಹ ಸ್ವಂತ ತನ್ನ ಕ್ಷೇತ್ರದಲ್ಲಿ ಸತ್ಯವನ್ನು ಎದುರಿಸಲಾಗದೇ ಪ್ರಿಯಾಂಕ್ ಖರ್ಗೆಹೇಡಿತನದಿಂದ ಮುಖ ಮುಚ್ಚಿಕೊಳ್ಳಲು ಯತ್ನಿಸುತ್ತಿದ್ದಾರೆಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಟೀಕಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಹೆದರಿರುವುದು ಎಲ್ಲರಿಗೂ ಗೊತ್ತು. ಆದರೆ ರಾತ್ರಿ 11 ಗಂಟೆಗೆ ಇದ್ದಕ್ಕಿದ್ದಂತೆಯೇ ನಿಷೇಧಾಜ್ಞೆ ಹೇರುತ್ತಾರೆ. ಕಲಬುರಗಿ ಪ್ರವೇಶಕ್ಕೆ ನಿರ್ಬಂಧಿಸುತ್ತಾರೆ ಎನ್ನುವುದು ಹಾಸ್ಯಾಸ್ಪದ. ಅಷ್ಟು ಮಾತ್ರವಲ್ಲದೇ ನಾಗರಿಕರ ರಕ್ಷಣೆಗಾಗಿ ಇರುವ ಪೊಲೀಸರನ್ನು ತಮ್ಮ ವೈಯಕ್ತಿಕ ಹಿತ ಸಾಧನೆಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಸೂಲಿಬೆಲೆ ಆರೋಪಿಸಿದರು.
ಪ್ರಿಯಾಂಕ್ ಖರ್ಗೆಯದ್ದು ಯಾವಾಗಲೂ ಹಿಟ್ ಅಂಡ್ ರನ್ . ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರಿಸದೇ ಓಡಿ ಹೋದವರು. ಮೋದಿಯವರ ಪ್ರಖರತೆಯಿಂದಾಗಿ ಅವರಿಗೆ ಸ್ವಂತ ಕ್ಷೇತ್ರದಲ್ಲೇ ಲೋಕಸಭಾ ಚುನಾವಣೆಯ ಸೋಲಿನ ಭೀತಿ ಎದುರಾಗಿದೆ. ಇಡೀ ಕಾಂಗ್ರೆಸ್ ಪಕ್ಷವೇ ಕಂಗಾಲಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ವ್ಯಂಗ್ಯವಾಡಿದ್ದಾರೆ.