ಬೆಂಗಳೂರು: ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ ಆರೋಪಿ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸಿದ್ದ ವಿಡಿಯೋಗಳನ್ನು ಪೊಲೀಸರು ಹೊರಹಾಕಿದ್ದಾರೆ. ಜೊತೆಗೆ ಆರೋಪಿಯ ಸ್ಕೆಚ್ ನ್ನೂ ಬಿಡುಗಡೆ ಮಾಡಲಾಗಿದೆ.
ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ ಆರೋಪಿಯ ಪತ್ತೆಗಾಗಿ ಪೊಲೀಸರು ಸಾರ್ವಜನಿಕರ ಸಹಾಯಕ್ಕೆ ಆಗ್ರಹಿಸಿದ್ದಾರೆ. ಈಗಾಗಲೇ ಆರೋಪಿಯ ಫೋಟೋ ಬಿಡುಗಡೆ ಮಾಡಿರುವ ಪೊಲೀಸರು ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ಘೋಷಿಸಿದ್ದರು.
ಕನ್ನಡಕ ಧರಿಸಿದ್ದ ಆರೋಪಿ ಟೋಪಿಯನ್ನೂ ಹಾಕಿಕೊಂಡಿದ್ದ. ಹೊರಗೆ ಓಡಾಡುವಾಗ ಮಾಸ್ಕ್ ಧರಿಸಿ ತನ್ನ ಗುರುತು ಸಿಗದಂತೆ ನೋಡಿಕೊಂಡಿದ್ದ. ಆದರೆ ಬಿಎಂಟಿಸಿ ಬಸ್ ನಲ್ಲಿ ಮಾಸ್ಕ್ ತೆಗೆದಿದ್ದ. ಹೀಗಾಗಿ ಆತನ ಮುಖ ಚಹರೆ ಪತ್ತೆಯಾಗಿದೆ. ಹೀಗಾಗಿ ಅದನ್ನು ಅನುಸರಿಸಿ ಸ್ಕೆಚ್ ಒಂದನ್ನು ಬರೆದು ಪೊಲೀಸರು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.
ಸ್ಕೆಚ್ ಮಾಡುವಾಗಲೂ ಪೊಲೀಸರು ಒಂದು ಮಾಸ್ಕ್ ಧರಿಸಿ ಮತ್ತೊಂದು ಮಾಸ್ಕ್ ಧರಿಸದೇ ಚಿತ್ರ ಬಿಡಿಸಿ ಪ್ರಕಟಿಸಿದ್ದಾರೆ. ಇದರಿಂದಾಗಿ ಯಾವುದೇ ಆಂಗಲ್ ನಲ್ಲಿ ಆರೋಪಿ ಬಗ್ಗೆ ಸುಳಿವು ಸಿಕ್ಕರೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬಹುದು ಎಂಬುದು ಇದರ ಹಿಂದಿನ ಉದ್ದೇಶ. ಈ ಶಂಕಿತ ಉಗ್ರನ ಬಗ್ಗೆ ಸುಳಿವು ಸಿಕ್ಕರೆ 080-29510900, 8904241100 ಎಂಬ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು. ಮಾಹಿತಿದಾರರ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ.