ಬೆಂಗಳೂರು (ಆ.13): ರಮೇಶ್ ಜಾರಕಿಹೊಳಿ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಅನುಪಸ್ಥಿತಿಯಲ್ಲಿ ನಡೆದಿರುವ ತನಿಖೆಯನ್ನು ಮರುಪರಿಶೀಲಿಸುವ ಅಗತ್ಯವಿಲ್ಲ ಎಂದು ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಹೈಕೋರ್ಟ್ಗೆ ಸ್ಪಷ್ಟಪಡಿಸಿದ್ದಾರೆ.
ರಮೇಶ್ ಜಾರಕಿಹೊಳಿ ಸಿ.ಡಿ. ಬಹಿರಂಗ ಪ್ರಕರಣವನ್ನು ಸಿಬಿಐ ತನಿಖೆ ವಹಿಸಬೇಕು ಮತ್ತು ತನಿಖೆಯ ಮೇಲ್ವಿಚಾರಣೆಯನ್ನು ಹೈಕೋರ್ಟ್ ವಹಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸ್ತಕಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಗುರುವಾರ ಸೌಮೇಂದು ಸ್ಪಷ್ಟಪಡಿಸಿದ್ದಾರೆ.
ಗುರುವಾರ ನಡೆದ ಅರ್ಜಿ ವಿಚಾರಣೆ ವೇಳೆ ಎಸ್ಐಟಿ ಮುಖ್ಯಸ್ಥರಿಲ್ಲದೆ ತನಿಖೆ ನಡೆಸಿರುವುದಕ್ಕೆ ಮತ್ತೆ ಆಕ್ಷೇಪಿಸಿದ ನ್ಯಾಯಪೀಠ, ಅನುಭವ ಹಾಗೂ ಹಿರಿತನ ತನಿಖೆಗೆ ನೆರವಾಗಬೇಕು ಎಂಬ ಉದ್ದೇಶದಿಂದ ಹಿರಿಯ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ. ಆದರೆ, ಆ ಹಿರಿಯ ಅಧಿಕಾರಿಯೇ ರಜೆಯಲ್ಲಿದ್ದರೆ ಸಮರ್ಪಕ ತನಿಖೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿತು.
ಸರ್ಕಾರದ ಪರ ಅಡ್ವೋಕೇಟ್ ಜನರಲ್ (ಎಜಿ) ಪ್ರಭುಲಿಂಗ ನಾವದಗಿ, ಎಸ್ಐಟಿ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ನಡೆದ ತನಿಖೆ ಅಸಮರ್ಪಕವಾಗುವುದಿಲ್ಲ ಎಂದು ತಿಳಿಸಿದರು.
ಅದನ್ನು ಪರಿಗಣಿಸಿದ ನ್ಯಾಯಪೀಠ, ಮುಖ್ಯಸ್ಥರು ಗೈರಾದ ಮಾತ್ರಕ್ಕೆ ಎಸ್ಐಟಿ ತನಿಖೆ ಅಸಮರ್ಪಕವಾಗುವುದಿಲ್ಲ ಎಂದು ಎ.ಜಿ. ಸಹ ಹೇಳಿದ್ದಾರೆ. ಅರ್ಜಿಯಲ್ಲಿ ಎಸ್ಐಟಿಯ ರಚನೆಯನ್ನೇ ಪ್ರಶ್ನಿಸಿರುವುದರಿಂದ ಸೂಕ್ತವಾದ ತನಿಖೆ ನಡೆದಿದೆಯೇ ಎಂಬುದನ್ನು ತಿಳಿಯಬೇಕಿದೆ. ಹಾಗಾಗಿ ಈ ಎಲ್ಲ ಅಂಶಗಳ ಬಗ್ಗೆ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತು.
ಅಲ್ಲದೆ, ಎಸ್ಐಟಿ ಮುಖ್ಯಸ್ಥರ ಅನುಪಸ್ಥಿತಿಯಲ್ಲಿಯೇ ಮೂರು ತಿಂಗಳು ಕಾಲ ತನಿಖೆ ನಡೆದಿದೆ. ಸೌಮೇಂದು ತಮ್ಮ ಜವಾಬ್ದಾರಿಯನ್ನು ಬೇರೊಬ್ಬರಿಗೆ ವರ್ಗಾಯಿಸಿಲ್ಲ. ವರದಿ ಸಲ್ಲಿಸುವ ಕೆಲಸವನ್ನು ಮಾತ್ರ ವರ್ಗಾಯಿಸಿದ್ದಾರೆ. ಅಂದ ಮಾತ್ರಕ್ಕೆ ಎಸ್ಐಟಿ ಮುಖ್ಯಸ್ಥರು ತನಿಖೆಯ ಉಸ್ತುವಾರಿ ವಹಿಸಿದಂತಾಗುವುದಿಲ್ಲ. ಮುಖರ್ಜಿ ಅವರು ತನಿಖೆ ಸರಿಯಾಗಿ ನಡೆದಿದೆಯೇ ಇಲ್ಲವೇ ಪರಿಶೀಲಿಸಬೇಕಿತ್ತು ಎಂದು ನುಡಿದ ನ್ಯಾಯಪೀಠ, ತನಿಖಾ ವರದಿಯನ್ನು ಪರಿಶೀಲಿಸಿ ಪ್ರತ್ಯೇಕ ಪ್ರಮಾಣ ಪತ್ರ ಸಲ್ಲಿಸುವ ಬಗ್ಗೆ ಸಂಜೆ 4 ಗಂಟೆಯೊಳಗೆ ಮುಖರ್ಜಿ ತಮ್ಮ ನಿಲುವನ್ನು ತಿಳಿಸಬೇಕು ಎಂದು ಸೂಚಿಸಿ ಕೆಲ ಕಾಲ ವಿಚಾರಣೆ ಮುಂದೂಡಿತು.
ವಿಚಾರಣೆ ಮತ್ತೆ ಆರಂಭವಾದಾಗ ಎಸ್ಐಟಿ ಪರ ವಕೀಲ ಪಿ.ಪ್ರಸನ್ನ ಕುಮಾರ್, ನ್ಯಾಯಾಲಯಕ್ಕೆ ಹಿಂದೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಹೇಳಿರುವ ಹೇಳಿಕೆಗೆ ಬದ್ಧವಾಗಿರುವುದಾಗಿ ಸೌಮೇಂದು ಮುಖರ್ಜಿ ತಿಳಿಸಿದ್ದಾರೆ. ಎಸ್ಐಟಿ ತನಿಖಾ ವರದಿಯನ್ನು ಮರು ಪರಿಶೀಲಿಸಲು ಮುಖರ್ಜಿ ಸಿದ್ಧರಿಲ್ಲ ಎಂದು ತಿಳಿಸಿದರು.
ನಂತರ ಅರ್ಜಿ ವಿಚಾರಣೆಯನ್ನು ಸೆ.3ಕ್ಕೆ ಮುಂದೂಡಿದ ನ್ಯಾಯಪೀಠ, ಪ್ರಕರಣ ಕುರಿತ ಅಂತಿಮ ತನಿಖಾ ವರದಿ ಸಲ್ಲಿಸದಂತೆ ಎಸ್ಐಟಿಗೆ ಸೂಚಿಸಿ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ಮುಂದುವರಿಸಿತು