Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ರಾಜ್ಯ ಬಜೆಟ್ ನಲ್ಲಿ ಘೋಷಿಸಿದಂತೆ ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ ರಾಜ್ಯ ಸರ್ಕಾರ ಭಾನುವಾರ ಅಧಿಕೃತ ಆದೇಶ ಹೊರಡಿಸಿದೆ.
2021-22 ನೇ ಸಾಲಿನ ಬಜೆಟ್ ವೇಳೆ ಘೋಷಿಸಿದಂತೆ ಒಕ್ಕಲಿಗ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಹೊಸ ನಿಗಮ ಸ್ಥಾಪಿಸಲು ಹಾಗೂ ನಿಗಮದ ಚಟುವಟಿಕೆಗಳಿಗೆ 500 ಕೋಟಿ ರೂ. ವೆಚ್ಚ ಮಾಡಲು ಯೋಜಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.
ಇಲಾಖೆಯ ಅಧೀನ ಕಾರ್ಯದರ್ಶಿ ವಿ. ಅಕ್ಕಮಹಾದೇವಿ ಆದೇಶದಲ್ಲಿ, ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ನಮೂದಾಗಿರುವ ಒಕ್ಕಲಿಗ, ವಕ್ಕಲಿಗ, ಸರ್ಪ ಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ನಾಮಧಾರಿ ಒಕ್ಕಲಿಗ, ಗಂಗಡ್ ಕಾರ್ ಒಕ್ಕಲಿಗ, ದಾಸ್ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಮರಸು ಒಕ್ಕಲಿಗ, ಗೌಡ, ಗೌಡ ಕುಂಚಿಟಿಗ, ಕಾಪು, ಹೆಗ್ಗಡೆ, ಕಮ್ಮ, ರೆಡ್ಡಿ, ಗೌಂಡರ್, ನಾಮಧಾರಿ ಗೌಡ, ಉಪ್ಪಿನ ಕೊಳಗ, ಉತ್ತಮ ಕೊಳಗ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಒಕ್ಕಲಿಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ಪೂರಕ ಹುದ್ದೆಗಳನ್ನು ಸೃಷ್ಟಿಸುವ ಬಗ್ಗೆ ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಮ್ಮ ಟ್ವಿಟರ್ ಖಾತೆಯಲ್ಲಿ ಸರ್ಕಾರದ ಈ ಆದೇಶವನ್ನು ಹಂಚಿಕೊಂಡಿದ್ದಾರೆ.