ಚಿಕ್ಕಬಳ್ಳಾಪುರ : ಹೊಲಗಳಲ್ಲೇ ಮೊಳಕೆಯೊಡೆದ ರಾಗಿ, ನೆಲಗಡಲೆ, ಮೇವಾಗಿ ಬಳಕೆಯಾಗುತ್ತಿದ್ದ ರಾಗಿ ಪೈರು,
ಮುಸುಕಿನ ಜೋಳ ಮಣ್ಣು ಪಾಲು ನಾನಾ ರೋಗಗಳಿಗೆ ತುತ್ತಾದ ಟೊಮೇಟೊ, ಮೂಲಂಗಿ, ತರಕಾರಿ ಬೆಳೆಗಳು ಇರುವ ಬೆಳೆಗಳನ್ನು ರಕ್ಷಿಸಲಾಗದೆ ರೈತರ ಪರದಾಟ.ಇದು ಸತತ 2 ತಿಂಗಳ ಮಳೆ ನಂತರ ಜಿಲ್ಲೆಯಲ್ಲಿ ನಿರ್ಮಾಣವಾಗಿರುವ ರೈತರ ದಯನೀಯ ಸ್ಥಿತಿ.
2019-2020ರಲ್ಲಿ ಕೊರೊನಾ ಬಿಟ್ಟೂ ಬಿಡದೆ ಕಾಡಿ ಕೃಷಿಕರ ಬದುಕು ಬೀದಿಗೆ ಬಿದ್ದಿತ್ತು. 2021ರಲ್ಲಿಯಾದರೂ ಉತ್ತಮ ಬೆಳೆ ಬೆಳೆಯಬಹುದು ಎಂದು ರೈತರು ನಿರೀಕ್ಷಿಸಿದ್ದರು. ಆದರೆ ಈ ಬಾರಿ ಬಿಟ್ಟೂ ಬಿಡದೆ ಕಾಡಿದ ಮಳೆರಾಯ ರೈತರ ಬದುಕನ್ನು ಮೂರಾಬಟ್ಟೆಯಾಗಿಸಿದೆ.
ಬೆಳೆ ಬಿತ್ತಲು ಮಾಡಿರುವ ವೆಚ್ಚವನ್ನು ಆಧರಿಸಿ ಸರ್ಕಾರ, ಬೆಳೆ ಹಾನಿ ಪರಿಹಾರ ನೀಡಬೇಕೆಂಬುದು ರೈತರ ಆಗ್ರಹವಾಗಿದೆ. ಪರಿಹಾರ ಸಿಗೋದು ಯಾವಾಗ? ಜಿಲ್ಲೆಯಲ್ಲಾದ ಮಳೆ ನಷ್ಟ ವೀಕ್ಷಿಸಲು ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರು, ಮಾಜಿ ಸಿಎಂಗಳು ಬಂದು ಹೋದರೂ ರೈತರಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಸಿಕ್ಕರೂ ಎಷ್ಟು ಸಿಗುತ್ತದೆ ಎಂಬುದರ ಬಗ್ಗೆ ಖಾತರಿಯಿಲ್ಲ. ಹೀಗಾಗಿ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ.