ರಾಯಚೂರು : ಕೃಷಿ ಮತ್ತು ಜಲ ಸಂಪನ್ಮೂಲ ಅಭಿವೃದ್ಧಿಯಲ್ಲಿ ರಾಯಚೂರು ಜಿಲ್ಲೆ ದೇಶದಲ್ಲೇ ಮೊದಲನೇ ರ್ಯಾಂಕ್ ಪಡೆದಿದೆ. ಮಹಾತ್ಮಾಕಾಂಕ್ಷೆ ಜಿಲ್ಲೆಗಳ ಕಾರ್ಯಕ್ರಮದಡಿ ಕೇಂದ್ರ ಸರ್ಕಾರದ ನೀತಿ ಆಯೋಗದಿಂದ ಜಿಲ್ಲೆ ಫಸ್ಟ್ ರ್ಯಾಂಕ್ ಪಡೆದುಕೊಂಡಿದೆ.
2023ರ ಮಾರ್ಚ್ನಲ್ಲಿ ಜಿಲ್ಲಾಡಳಿತದ ಕಾರ್ಯವೈಖರಿ ಆಧಾರದ ಮೇಲೆ ಜಿಲ್ಲೆಗೆ ಈ ರ್ಯಾಂಕ್ ನೀಡಲಾಗಿದೆ. ರಾಜ್ಯದಲ್ಲಿ ರಾಯಚೂರು ಹಾಗೂ ಯಾದಗಿರಿ ಮಹತ್ವಾಕಾಂಕ್ಷೆ ಜಿಲ್ಲೆಗಳಾಗಿದ್ದು, ದೇಶದ ಒಟ್ಟು 115 ಮಹತ್ವಾಕಾಂಕ್ಷೆ ಜಿಲ್ಲೆಗಳಲ್ಲಿ ರಾಯಚೂರಿಗೆ ಮೊದಲ ಸ್ಥಾನ ದೊರೆತಿದೆ. ಕಾರ್ಯಕ್ಷಮತೆ ಮೇರೆಗೆ, ಮೊದಲ ಸ್ಥಾನ ಪಡೆದ ಹಿನ್ನೆಲೆ ಹೆಚ್ಚುವರಿ 3 ಕೋಟಿ ರೂ. ಅನುದಾನ ಪಡೆಯಲು ಜಿಲ್ಲೆ ಅರ್ಹತೆ ಪಡೆದಿದೆ.
ಕೃಷಿ ಕ್ಷೇತ್ರ ವಿಸ್ತರಣೆ, ಜಲ ಸಂರಕ್ಷಣೆ ವಿಧಾನಗಳು ಹಾಗೂ ನೀತಿ ಆಯೋಗದ ಮಾನದಂಡಗಳ ಅಡಿ ಮಂಡಿಸಿರುವ ಜಿಲ್ಲೆಯ ಸ್ಥಿತಿಗತಿಗಳ ವರದಿ ಆಧಾರದ ಮೇಲೆ ಜಿಲ್ಲೆಗೆ ಈ ಸ್ಥಾನ ದೊರಕಿದೆ. ಈ ವಿಚಾರವಾಗಿ ಕೇಂದ್ರ ನೀತಿ ಆಯೋಗದ ಹೆಚ್ಚುವರಿ ಕಾರ್ಯದರ್ಶಿ ವಿ.ರಾಧಾ ಅವರು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ವಂದಿತಾ ಶರ್ಮಾರಿಗೆ ಪತ್ರ ಬರೆದು ಅಭಿನಂದಿಸಿದ್ದಾರೆ.