ಬೆಂಗಳೂರು: ಹತ್ಯೆ ಆರೋಪದಲ್ಲಿ ಬಂಧನದಲ್ಲಿರುವ ನಟ ದರ್ಶನ್ ರನ್ನು ಇರಿಸಿಕೊಂಡಿರುವ ಅನ್ನಪೂರ್ಣೇಶ್ವರಿ ನಗರರ ಪೊಲೀಸ್ ಠಾಣೆಯ ಮುಂಭಾಗ ನಿನ್ನೆಯಿಂದ ಪೊಲೀಸರು ಶಾಮಿಯಾನ ಹಾಕಿದ್ದು ಭಾರೀ ಟೀಕೆಗೆ ಗುರಿಯಾಗಿತ್ತು.
ದರ್ಶನ್ ಆಂಡ್ ಗ್ಯಾಂಗ್ ರನ್ನು ರಕ್ಷಿಸುವ ಸಲುವಾಗಿಯೇ ಪೊಲೀಸರು ಈ ಕೆಲಸ ಮಾಡುತ್ತಿದ್ದಾರೆ ಎಂದು ಕೆಲವರು ದೂರಿದ್ದರು. ಕರ್ನಾಟಕ ಬಿಜೆಪಿ ಘಟಕ ಕೂಡಾ ಪೊಲೀಸರ ಕ್ರಮವನ್ನು ಪ್ರಶ್ನಿಸಿತ್ತು. ಇದುವರೆಗೆ ಇಲ್ಲದಂತಹ ಬಂದೋಬಸ್ತ್ ಈಗ ಯಾಕೆ ಎಂದು ಪ್ರಶ್ನಿಸಿತ್ತು.
ಆದರೆ ಪೊಲೀಸರ ಶಾಮಿಯಾನದಿಂದಾಗಿ ಈಗ ಸಾರ್ವಜನಿಕರಿಗೂ ಓಡಾಟಕ್ಕೆ ಅನಾನುಕೂಲವಾಗಿದೆ. ಇಲ್ಲಿ ಪ್ರತಿನಿತ್ಯ ಓಡಾಟ ಮಾಡುವವರು ಈ ರೀತಿ ಮಾಡಿದರೆ ನಾವು ಯಾವ ದಾರಿಯಲ್ಲಿ ಹೋಗಬೇಕು, ನಮಗೆ ಮೊದಲು ಬೇರೆ ದಾರಿ ಯಾವುದು ಇದೆ ಎಂದು ತಿಳಿಸಿ. ಹತ್ಯೆ ಆರೋಪಿಗಳಿಗೆ ತಕ್ಕ ಪಾಠ ಕಲಿಸಿ. ಅವರಿಗೆ ತಕ್ಕ ಶಿಕ್ಷೆ ನೀಡಿ. ಆದರೆ ಈ ರೀತಿ ಶಾಮಿಯಾನ ಹಾಕಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಕೊಡಬೇಡಿ ಎಂದಿದ್ದಾರೆ.
ದರ್ಶನ್ ರನ್ನು ಬಂಧಿಸಿದ ಮೊದಲ ಎರಡು ದಿನ ಇಲ್ಲಿ ಅಭಿಮಾನಿಗಳು ಜಮಾಯಿಸುತ್ತಿದ್ದರು ಆದರೆ ಈಗ ಅಭಿಮಾನಿಗಳು ಇಲ್ಲ. ಹಾಗಿದ್ದರೂ ಪೊಲೀಸರು ಶಾಮಿಯಾನ ಹಾಕಿ ರಸ್ತೆ ಅಡ್ಡಗಟ್ಟುತ್ತಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.