ಬೆಂಗಳೂರು : ಬುಧವಾರ ಬಜೆಟ್ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಕುರಿತು ವಂದನಾ ನಿರ್ಣಯ ಅರ್ಪಿಸುವ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್ ಉಗ್ರರು ರಾಜಾರೋಷವಾಗಿ ಓಡಾಡುತ್ತಿರುವುದಕ್ಕೆ ಕಾಂಗ್ರೆಸ್ ಅವರ ರಕ್ಷಣೆಗೆ ನಿಂತಿರುವುದೇ ಕಾರಣ ಎಂದು ಆರೋಪಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಅಪರಾಧ ಪ್ರಕರಣಗಳ ಹೆಚ್ಚಳವಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ನೆಲಸಮವಾಗಿದ್ದ ಭಯೋತ್ಪಾದನಾ ಚಟುವಟಿಕೆಗಳು ಮತ್ತೆ ತಲೆಯೆತ್ತಲಾರಂಭಿಸಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಹಲವು ಸಮಾಜವಿರೋಧಿ ಸಂಘಟನೆಗಳನ್ನು ಮಟ್ಟ ಹಾಕಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದೊಡನೆಯೇ ಅವರ ಮೇಲಿದ್ದ ಪ್ರಕರಣಗಳನ್ನು ಹಿಂಪಡೆದಿದ್ದಾರೆ. ಕೋಲಾರದಲ್ಲಿ ಕತ್ತಿ ಮಚ್ಚುಗಳನ್ನು ಬಹಿರಂಗ ಕಟೌಟ್ ಹಾಕಿ ಆತಂಕವೆಬ್ಬಿಸಿದ್ದಾರೆ. ಶಿವಮೊಗ್ಗದಲ್ಲಿ ಹಿಂದೂಗಳ ಮನೆಯ ಮೇಲೆ ಕಲ್ಲು ತೂರಾಟ ನಡೆದಿದೆ. ಬಳ್ಳಾರಿಯಲ್ಲಿ ಶಂಕಿತ ಉಗ್ರರನ್ನು ಎನ್‌ಐಎ ಬಂಧಿಸಿದೆ ಇವೆಲ್ಲವೂ ಇತ್ತೀಚಿನ ದಿನಗಳಲ್ಲಿ ನಡೆದ ಘಟನೆಯಾಗಿದೆ ಎಂದು ಆರ್. ಅಶೋಕ್ ಆರೋಪಿಸಿದರು.
ಎನ್‌ಐಎ ರಾಜ್ಯದಲ್ಲಿ ಹಲವೆಡೆ ದಾಳಿ ಮಾಡಿದಾಗ ಸಿಕ್ಕಿಬಿದ್ದ ಉಗ್ರರಿಂದ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಸುಧಾರಿತ ಸ್ಫೋಟಕಗಳನ್ನು ಬಳಸಿ ನಮ್ಮ ರಾಜ್ಯದ ಜನರ ಮಾರಣ ಹೋಮ ನಡೆಸಲು ಸಿದ್ದತೆ ಮಾಡಿಕೊಂಡಿದ್ದ ಉಗ್ರರು. ರಾಜ್ಯದ ಪ್ರವಾಸೋದ್ಯಮಕ್ಕೂ ಸಹ ಪೆಟ್ಟು ನೀಡಲು ಬಯಸಿದ್ದರು ಎಂದು ಆರ್. ಅಶೋಕ್ ಹೇಳಿದರು.