ಬೆಂಗಳೂರು: ಹೋಟೆಲ್ ಮತ್ತು ಫಲಹಾರ ಮಂದಿರಗಳಿಗೆ ಕೋವಿಡ್ ಸಮಯದಲ್ಲಿ ರಾಜ್ಯ ಸರಕಾರ ನೀಡಿದ್ದ ನಿಗದಿತ ವಿದ್ಯುತ್ ಶುಲ್ಕ ವಿನಾಯಿತಿಯನ್ನು ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ನೋಂದಣಿ ಆಗಿರುವ ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ಹೋಟೆಲ್ ಗಳಿಗೆ ನೀಡಲು ಬೆಸ್ಕಾಂ ಸಮ್ಮತಿಸಿದೆ.
ಬೃಹತ್ ಬೆಂಗಳೂರು ಹೋಟೆಲ್ಗಳ ಸಂಘದ ಅಧ್ಯಕ್ಷ ಪಿ.ಸಿ. ರಾವ್ ನೇತೃತ್ವದ ಸಂಘದ ಪದಾಧಿಕಾರಿಗಳ ಜತೆ ಮಂಗಳವಾರ ನಡೆದ ಸಭೆಯಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಿ. ರಾಜೇಂದ್ರ ಚೋಳನ್ ಈ ಭರವಸೆ ನೀಡಿದ್ದಾರೆ.
ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ನೋಂದಣಿ ಆಗಿರುವ ಹೋಟೆಲ್ ಮತ್ತು ಫಲಹಾರ ಮಂದಿರಗಳ ವಿವರಗಳನ್ನು ವಲಯವಾರು ನೀಡಿದಲ್ಲಿ ಏಪ್ರಿಲ್ 2021 ರಿಂದ ಜೂನ್ 2021 ರ ಅವಧಿಯವರೆಗಿನ ನಿಗದಿತ ವಿದ್ಯುತ್ ಶುಲ್ಕದ ವಿನಾಯಿತಿಯನ್ನು ಪಡೆಯಬಹುದು ಎಂದು ಬೆಸ್ಕಾಂ ಎಂಡಿ ಹೋಟೆಲ್ ಸಂಘದ ಪದಾಧಿಕಾರಿಗಳಿಗೆ ಭರವಸೆ ನೀಡಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಹೋಟೆಲ್ ಮತ್ತ್ತು ಫಲಹಾರ ಮಂದಿರಗಳಿಗೆ 3 ತಿಂಗಳ ಕಾಲ ನಿಗದಿತ ವಿದ್ಯುತ್ ಶುಲ್ಕ ವಿನಾಯಿತಿ ನೀಡಿ ರಾಜ್ಯ ಸರಕಾರ ಆಗಸ್ಟ್ 16, 2021 ರಂದು ಆದೇಶಿಸಿತ್ತು.
ನಿಗದಿತ ವಿದ್ಯುತ್ ಶುಲ್ಕದ ವಿನಾಯಿತಿಗೆ ಸಂಬಂಧಿಸಿದಂತೆ ಸುತ್ತೋಲೆಯನ್ನು ಹೊರಡಿಸಲಾಗುವುದು ಎಂದು ಬೆಸ್ಕಾಂ ಭರವಸೆ ನೀಡಿದೆ.