ಬಿಬಿಎಂಪಿ ವಲಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆ ನಡೆಸಿದರು. ಯಲಹಂಕ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಯಲಹಂಕ ಕೆರೆಯು 292 ಎಕರೆ ಪ್ರದೇಶದಲ್ಲಿದ್ದು, ಕೆರೆಯಲ್ಲಿ ಹೂಳನ್ನು ತೆರವುಗೊಳಿಸಿ, ಬಂಡ್, ಜೌಗು ಪ್ರದೇಶ, ಇನ್ಲೆಟ್-ಔಟ್ಲೆಟ್, ಕೆರೆಗೆ ಕೊಳಚೆ ನೀರು ಸೇರದಿರುವ ಹಾಗೆ ತಿರುವುಗಾಲುವೆ ನಿರ್ಮಾಣ, ಭದ್ರತಾ ಸಿಬ್ಬಂದಿಯ ಕೊಠಡಿ, ಸೈಕಲ್ ಟ್ರ್ಯಾಕ್, ವಿಹಾರಕ್ಕೆ ಬರುವವರಿಗೆ ವಿರಾಮದ ಸ್ಥಳ ಹಾಗೂ ಕೆರೆಯ ಸುತ್ತಲು ಫೆನ್ಸಿಂಗ್ ಅಳವಡಿಕೆ ಮಾಡಲಾಗಿದೆ. ಮಳೆಗಾಲದ ವೇಳೆ ಸ್ಥಳೀಯ ಪ್ರದೇಶದಲ್ಲಿ ಜಾಲಾವೃತವಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ರಾಜಕಾಲುವೆಗಳ ದುರಸ್ಥಿ ಕಾರ್ಯ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್, ಡಾ. ಬಿ.ಆರ್.ಅಂಬೇಡ್ಕರ್ ಭವನ, ಸೈಕಲ್ ಟ್ರ್ಯಾಕ್ ಹಾಗೂ ವೈಟ್ ಟಾಪಿಂಗ್ ಕಾಮಗಾರಿ, ಅಟ್ಟೂರು ಕೆರೆ, ಅಟ್ಟೂರು ಸಸ್ಯಕ್ಷೇತ್ರ, ಜಕ್ಕೂರು ರಸ್ತೆ ಅಗಲೀಕರಣ ಕಾಮಗಾರಿ, ಜೆ.ಎನ್.ಸಿ.ಎ.ಎಸ್.ಆರ್, ಡಾಂಬರು ಮಿಶ್ರಣ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.