ಗಣೇಶ ಚತುರ್ಥಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಇಡೀ ದೇಶವೇ ಸಜ್ಜಾಗುತ್ತಿದೆ. ಈ ನಡುವೆ ಕರ್ನಾಟಕದಲ್ಲಿ ಖಾಸಗಿ ಬಸ್ ಮಾಲೀಕರು ಟಿಕೆಟ್ ದರಗಳಲ್ಲಿ ಭಾರೀ ಹೆಚ್ಚಳ ಮಾಡಿದ್ದಾರೆ. ಬೆಂಗಳೂರಿನಿಂದ ಬಳ್ಳಾರಿ, ಶಿವಮೊಗ್ಗ, ಬೆಳಗಾವಿ, ವಿಜಯಪುರ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಿಗೆ ತೆರಳುವ ಬಸ್ಗಳ ದರ ಹೆಚ್ಚಿಸಲಾಗಿದೆ. ಪ್ರತಿ ಬಾರಿ ಹಬ್ಬ ಹರಿದಿನಗಳಲ್ಲಿ ಖಾಸಗಿ ಬಸ್ಗಳು ಪ್ರಯಾಣಿಕರಿಗೆ ದುಪ್ಪಟ್ಟು ಹಣ ವಸೂಲಿ ಮಾಡುತ್ತವೆ. ಹೀಗಾಗಿ ದುಪ್ಪಟ್ಟು ಹಣ ಪಡೆಯದಂತೆ ಟಿಕೆಟ್ ಬುಕ್ಕಿಂಗ್ ಕಂಪನಿಗಳಿಗೆ ಸಾರಿಗೆ ಇಲಾಖೆ ಆಯುಕ್ತರು ಎಚ್ಚರಿಕೆ ನೀಡಿದ್ದರು. ಆದರೂ ಗಣೇಶ ಹಬ್ಬ ಸಮೀಪಿಸುತ್ತಿದ್ದಂತೆ ಸಾಮಾನ್ಯ ದಿನಗಳಲ್ಲಿ 500-700 ರೂಪಾಯಿ ಇದ್ದ ಟಿಕೆಟ್ ದರವನ್ನು 1500- 2500 ರೂಪಾಯಿಗೆ ಹೆಚ್ಚಳ ಆಗಿದ್ದು, ಪ್ರಯಾಣಿಕರು ತತ್ತರಿಸಿದ್ದಾರೆ.