ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮತ್ತು ಮೈಸೂರು ಸಂಸದ ಪ್ರತಾಪ್ ಸಿಂಹ ನಡುವಿನ ವಾಕ್ಸಮರ ಮುಂದುವರಿದಿದೆ.
ಮೊದಲಿಗೆ ಪ್ರತಾಪ್ ಸಿಂಹ ಸುಮಲತಾ ಬಗ್ಗೆ ಅವರು ಏನೂ ಕೆಲಸ ಮಾಡಲ್ಲ ಎಂದು ಮಾತನಾಡುತ್ತಿದ್ದ ವಿಡಿಯೋ ವೈರಲ್ ಆಗಿದ್ದು ಎಲ್ಲಾ ವಿವಾದಕ್ಕೆ ಕಾರಣವಾಯಿತು. ಇದಾದ ಬಳಿಕ ಸುಮಲತಾ ಕೂಡಾ ಪ್ರತಾಪ್ ವಿರುದ್ಧ ಟ್ವಿಟರ್ ಮೂಲಕ ಪುರಂದರ ದಾಸರ ಆಚಾರವಿಲ್ಲದ ನಾಲಿಗೆ ಸಾಲುಗಳನ್ನು ಬರೆದು ಪ್ರತಿ ಟಾಂಗ್ ಕೊಟ್ಟಿದ್ದರು. ಅಲ್ಲದೆ, ಅಂಬರೀಶ್ ಇದ್ದಾಗ ಈ ರೀತಿ ಮಾತನಾಡಲು ಯಾರಿಗೂ ಧೈರ್ಯವಿರಲಿಲ್ಲ ಎಂದಿದ್ದರು. ಇದಕ್ಕೀಗ ಪ್ರತಾಪ್ ಸಿಂಹ ಕೂಡಾ ತಿರುಗೇಟು ಕೊಟ್ಟಿದ್ದಾರೆ. ನಾವು ಯಾರೂ ಪಾಳೆಗಾರಿಕೆ ಮಾಡಲು ಬಂದಿಲ್ಲ. ನನಗೆ ಯಾವುದೇ ಬ್ಯಾಕ್ ಗ್ರೌಂಡ್ ಇಲ್ಲ. ಸ್ವಂತ ಪರಿಶ್ರಮದಿಂದ ಮೇಲೆ ಬಂದಿದ್ದೇನೆ. ನನ್ನ ಕೆಲಸವೇ ನನಗೆ ಶ್ರೀರಕ್ಷೆ. ಮಂಡ್ಯ, ಮೈಸೂರು, ಬೆಂಗಳೂರಿನ ಜನರಿಗೆ ನೆರವಾಗಲು 10 ಪಥದ ರಾಷ್ಟ್ರೀಯ ಹೆದ್ದಾರಿಯನ್ನು ಆದಷ್ಟು ಬೇಗ ಪೂರ್ತಿ ಮಾಡಬೇಕು ಎಂಬುದಷ್ಟೇ ಉದ್ದೇಶ. ಅದಕ್ಕಾಗಿ ಸತತವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಮಾಧ‍್ಯಮಗಳ ಮುಂದೆ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದ್ದಾರೆ.