ಬೆಂಗಳೂರು: ಪ್ರಧಾನಿ ಮೋದಿ ಇಂದು ಬೆಂಗಳೂರಿನ ಎಚ್ ಎಎಲ್ ಗೆ ಭೇಟಿ ನೀಡಿದ್ದು, ಫೈಟರ್ ಜೆಟ್ ನಲ್ಲಿ ಕುಳಿತು ಹಾರಾಟ ನಡೆಸಿದ್ದಾರೆ.
ಇಂದು ಬೆಳಿಗ್ಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಗೆ ಭೇಟಿ ಕೊಟ್ಟ ಪ್ರಧಾನಿ ಮೋದಿ ಕಾಮಗಾರಿಗಳ ವೀಕ್ಷಣೆ ಮಾಡಿದರು. ಬಳಿಕ ತೇಜಸ್ ಯುದ್ಧ ವಿಮಾನದಲ್ಲಿ ಸಮವಸ್ತ್ರ ಧರಿಸಿ ಹಾರಾಟ ನಡೆಸಿದರು. ಆ ಫೋಟೋ, ವಿಡಿಯೋಗಳು ಪ್ರಧಾನಿ ಮೋದಿಯವರ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಲಾಗಿದೆ.
ಆದರೆ ಈ ವಿಡಿಯೋಗಳಲ್ಲಿ ಪ್ರಧಾನಿ ಮೋದಿ ವಿಮಾನ ಆಕಾಶದಲ್ಲಿ ಹಾರಾಟ ನಡೆಸುತ್ತಿರುವಾಗಲೂ ಕೈ ಬೀಸುತ್ತಿರುತ್ತಾರೆ. ಪ್ರಧಾನಿಯ ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೊಳಗಾಗಿದೆ. ಆಕಾಶದೆತ್ತರ ಹಾರಿದ ಮೇಲೂ ಪ್ರಧಾನಿ ಹೊರಗಡೆ ನೋಡಿ ಯಾರಿಗೆ ಕೈ ಬೀಸುತ್ತಿದ್ದಾರೆ ಎಂದು ಕೆಲವರು ತಮಾಷೆ ಮಾಡಿದ್ದಾರೆ.
ಫೈಟರ್ ಜೆಟ್ ನಲ್ಲಿ ಸುಮಾರು 45 ನಿಮಿಷಗಳ ಕಾಲ ಪರಿಣಿತರೊಂದಿಗೆ ಮೋದಿ ಹಾರಾಟ ನಡೆಸಿದ್ದಾರೆ. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಪ್ರಕಟಿಸಿರುವ ಮೋದಿ ತೇಜಸ್ ವಿಹಾರವನ್ನು ಯಶಸ್ವಿಯಾಗಿ ಮುಗಿಸಿದೆ. ನಮ್ಮ ದೇಶದ ಸ್ಥಳೀಯ ಉತ್ಪಾದನಾ ಸಾಮರ್ಥ್ಯಗಳಲ್ಲಿನ ನನ್ನ ವಿಶ್ವಾಸ ಹೆಚ್ಚಾಗಿದೆ. ನಮ್ಮ ರಾಷ್ಟ್ರದ ಬಗ್ಗೆ ಹೆಮ್ಮೆ ಎನಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.