ದೇಶದ ಪ್ರಧಾನಿ ನರೇಂದ್ರ ಮೋದಿ ಬಡವರ ಮೇಲೆ ಪರೋಕ್ಷವಾಗಿ ದಾಳಿ ಮಾಡಿದ್ದಾರೆ. ಮೇಡ್ ಡಿಸಾಸ್ಟರ್ ಇದು ದೇಶಕ್ಕೆ ಪ್ರಧಾನಿ ಕೊಡುಗೆಯಾಗಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದಿರಾ ಗಾಂಧಿ ಶತಮಾನೋತ್ಸವದ ಅಂಗವಾಗಿ ಕುಂದಾನಗರಿಯಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರೈತರ ಭೂಮಿಯನ್ನು ಕಸಿದುಕೊಳ್ಳುವ ಕಾನೂನನ್ನು ಪಾಸ್ ಮಾಡಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
ದೇಶದಲ್ಲಿ ಒಂದೆಡೆ ಶ್ರೀಮಂತರು ಬೀಗುತ್ತಿದ್ದರೆ, ಮತ್ತೊಂದೆಡೆ ರೈತರು ಹಾಗೂ ಬಡವರು ನೋವು ಅನುಭವಿಸುತ್ತಿದ್ದಾರೆ. ಭ್ರಷ್ಟಾಚಾರ ಮುಕ್ತ ಭಾರತಗೊಳಿಸಲು ಕಾಂಗ್ರೆಸ್ ಬಯಸುತ್ತದೆ. ಈ ನಿಟ್ಟಿನಲ್ಲಿ ಬಿಜೆಪಿಗೆ ಸಂಪೂರ್ಣ ಸಹಕಾರ ನೀಡಲಿದೆ. ಆದರೆ, ನೋಟ್ ಬ್ಯಾನ್ ವಿಚಾರ ಭ್ರಷ್ಟಾಚಾರ ವಿರುದ್ಧದ ಕ್ರಮವಲ್ಲ. ಇದು ಬಡವರ ವಿರುದ್ಧವಾಗಿದೆ ಎಂದರು.
ವಿಜಯ್ ಮಲ್ಯ ಹಾಗೂ ಲಲಿತ್ ಮೋದಿ ವಿದೇಶದಲ್ಲಿ ಯಾಕಿದ್ದಾರೆ? ಮಲ್ಯ ಅವರ 1200 ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿದ್ದು ಯಾಕೆ ಎಂದು ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರನ್ನು ಪ್ರಶ್ನೆಸಿದರು.
ಕಪ್ಪು ಹಣ ಬಡವರು ಹಾಗೂ ಶ್ರಮಿಕ ವರ್ಗದವರಲ್ಲಿಲ್ಲ. ಬ್ಯಾಂಕ್ ಮುಂದೆ ಕ್ಯೂ ನಿಂತವರು ಕಳ್ಳರಲ್ಲ, ಅವರು ಪ್ರಾಮಾಣಿಕ ವ್ಯಕ್ತಿಗಳು ಎಂದು ಕಿಡಿಕಾರಿದರು.
ಕರ್ನಾಟಕ ರಾಜ್ಯದ ರೈತರ ಸಮಸ್ಯೆಗಳಿಗೆ ಪ್ರಧಾನಿ ಮೋದಿ ಸ್ಪಂದಿಸುತ್ತಿಲ್ಲ. ನೋಟ್ ಬ್ಯಾನ್‌ನಿಂದ ಉಂಟಾಗಿರುವ ಸಮಸ್ಯೆ ಕೇವಲ 50 ದಿನಗಳಲ್ಲಿ ನಿವಾರಣೆಯಾಗಲಿದೆ ಎಂದು ಹೇಳಿದ್ದರು. ಆದರೆ, ಸದ್ಯದ ಸ್ಥಿತಿ ನೋಡಿದರೆ ಸಮಸ್ಯೆ ಬಗೆಹರಿಯಲು ನಾಲ್ಕೈದು ತಿಂಗಳಾದ್ರೂ ಬೇಕು. ಅಲ್ಲಿಯವರೆಗೂ ಸಮಸ್ಯೆ ತಪ್ಪಿದ್ದಲ್ಲ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ