ಸಕ್ಕರೆ ನಾಡು ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಮಂಚನಹಳ್ಳಿ ಗ್ರಾಮದಲ್ಲಿ ನಿರಂತರವಾಗಿ ಕಾಡಾನೆಗಳು ರಾತ್ರಿ ವೇಳೆಯಲ್ಲಿ ಕಾಡಿನಿಂದ ಆಹಾರಕ್ಕಾಗಿ ನಾಡಿಗೆ ಬಂದು ರೈತರು ಕಷ್ಟ ಪಟ್ಟು ಬೆಳೆದ ಬೆಳೆಯನ್ನು ಕ್ಷಣಾರ್ಧದಲ್ಲಿ ನಾಶ ಪಡಿಸುತ್ತಿವೆ.
ಮಳವಳ್ಳಿ ತಾಲ್ಲೂಕಿನಲ್ಲಿರುವ ಶಿಂಷಾ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಹೆಬ್ಬಣಿ, ಮಂಚನಹಳ್ಳಿ, ನೆಟ್ಕಲ್ , ಶಿಂಷಾ ಸೇರಿದಂತೆ ಅನೇಕ ಗ್ರಾಮಗಳಿಗೆ ರಾತ್ರಿ ವೇಳೆಯಲ್ಲಿ ಕಾಡಾನೆಗಳ ಅಟ್ಟಹಾಸ ಹೆಚ್ಚಾಗುತ್ತಿದೆ. ಇಲ್ಲಿ ಸಂಜೆ ಆರು ಗಂಟೆಯಾದ ಮೇಲೆ ಯಾರೂ ತಿರುಗಾಡುವುದಿಲ್ಲ. ಇದಕ್ಕೆ ಕಾರಣ ಕಾಡಾನೆಗಳ ಭಯ.
ರೈತರ ಸರ್ಕಾರ ಎಂದು ಹೇಳಿಕೊಳ್ಳುವ ಸಮ್ಮಿಶ್ರ ಸರ್ಕಾರದ ಅದರಲ್ಲೂ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಅಪ್ತರೇ ಈ ಕ್ಷೇತ್ರದ ಶಾಸಕರಾಗಿದ್ದಾರೆ. ಇಷ್ಟಿದ್ದರೂ ಇದುವರೆಗೂ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿಗಳು ಈ ಭಾಗದಲ್ಲಿ ರಾತ್ರಿ ಗಸ್ತು ಹೆಚ್ಚಿಸಬೇಕು. ಆನೆಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸಿದ್ದಾರೆ.