ಕಾಡಾನೆಗಳ ಹಿಂಡು ದಾಳಿ ನಡೆಸಿ ಬೆಳೆ ನಾಶ ಮಾಡುತ್ತಿರುವುದರಿಂದ ಕರ್ನಾಟಕ – ಆಂಧ್ರಪ್ರದೇಶ ಗಡಿ ಭಾಗದ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಕೋಲಾರ ಜಿಲ್ಲೆ ಹಾಗೂ ಆಂಧ್ರಪ್ರದೇಶದ ಗಡಿ ಭಾಗದಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದೆ. ಕರ್ನಾಟಕ ಹಾಗೂ ಅಂಧ್ರ ಗಡಿ ಭಾಗದ ಅರಣ್ಯದಲ್ಲಿ ಬೀಡುಬಿಟ್ಟಿರುವ ಗಜಪಡೆಯಿಂದಾಗಿ ಅಲ್ಲಿನ ಜನರು ನೆಮ್ಮದಿ ಕಳೆದುಕೊಳ್ಳುವಂತಾಗಿದೆ.
50ಕ್ಕೂ ಹೆಚ್ಚು ಕಾಡಾನೆಗಳು ಎರಡು ಗುಂಪುಗಳಾಗಿ ವಿಂಗಡಣೆಯಾಗಿವೆ. ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಆಂಧ್ರದ ಗುಡಿಪಲ್ಲಿ ಮಂಡಲಂನಲ್ಲಿರುವ ಕಾಡಾನೆಗಳು ಬೆಳೆ ನಾಶಪಡಿಸುತ್ತಲೇ ಇವೆ.
ಆನೆಗಳು ಲಗ್ಗೆಯಿಟ್ಟ ಹಿನ್ನಲೆ ಬಂಗಾರಪೇಟೆ ಗಡಿ ಭಾಗದ ಗ್ರಾಮಸ್ಥರಿಗೂ ಆತಂಕ ಶುರುವಾಗಿದೆ. ಎರಡು ವಾರಗಳಿಂದ ಬೆಳೆಗಳನ್ನ ನಾಶ ಮಾಡುತ್ತಿರುವ ಕಾಡಾನೆಗಳು ಜನರಲ್ಲಿ ಆತಂಕಕ್ಕೆ ಕಾರಣವಾಗಿವೆ.
ತಮಿಳುನಾಡಿನ ಅರಣ್ಯಕ್ಕೆ ಕಾಡಾನೆಗಳನ್ನ ಓಡಿಸಲು ಆಂಧ್ರ ಹಾಗೂ ಕೋಲಾರ ಜಿಲ್ಲೆಯ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.