ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ದರ್ಶನ್ ಮತ್ತು ಪವಿತ್ರಾ ಗೌಡ ಹಾಗೂ ಸಹಚರರನ್ನು ಪೊಲೀಸ್ ಕಸ್ಟಡಿ ಅಂತ್ಯಗೊಂಡ ಹಿನ್ನಲೆಯಲ್ಲಿ ಕೋರ್ಟ್ ಗೆ ಹಾಜರುಪಡಿಸಲಾಯಿತು.
ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಎಂಬ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆಸಿ ದರ್ಶನ್ ಆಂಡ್ ಗ್ಯಾಂಗ್ ಭೀಕರವಾಗಿ ಹಲ್ಲೆ ನಡೆಸಿದ ಪರಿಣಾಮ ಆತ ಸಾವನ್ನಪ್ಪಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 9 ದಿನಗಳಿಂದ ದರ್ಶನ್ ಆಂಡ್ ಗ್ಯಾಂಗ್ ಪೊಲೀಸ್ ಕಸ್ಟಡಿಯಲ್ಲಿದ್ದರು.
ಇಂದು ಅವರ ಪೊಲೀಸ್ ಕಸ್ಟಡಿ ಅಂತ್ಯಗೊಂಡ ಹಿನ್ನಲೆಯಲ್ಲಿ ಕೋರ್ಟ್ ಗೆ ಹಾಜರುಪಡಿಸಲಾಯಿತು. ಈ ವೇಳೆ ಪವಿತ್ರಾ ಗೌಡ ಪುತ್ರಿ ಖುಷಿ ಗೌಡ ತನ್ನ ಅಜ್ಜಿಯ ಜೊತೆಗೆ ಕೋರ್ಟ್ ಗೆ ಬಂದಿದ್ದಾಳೆ. ಅಮ್ಮನ ಬಗ್ಗೆ ಕೋರ್ಟ್ ಏನು ತೀರ್ಪು ನೀಡುವುದೋ ಎಂಬ ಆತಂಕದಲ್ಲಿ ಪವಿತ್ರಾ ಪುತ್ರಿ ಕೋರ್ಟ್ ಗೆ ಬಂದಿದ್ದಳು.
ವಾದ-ವಿವಾದ ಆಲಿಸಿದ ನ್ಯಾಯಾಧೀಶರು ಕೊನೆಗೆ ಪವಿತ್ರಾ ಗೌಡ ಹಾಗೂ ಇತರ 10 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿ ಕೋರ್ಟ್ ಆದೇಶ ನೀಡಿದೆ. ಹೀಗಾಗಿ ಪವಿತ್ರಾ ಗೌಡ ಮತ್ತು ಇತರ 10 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಆಗಲಿದ್ದಾರೆ.