ಹೊನ್ನಾವರ ಪಟ್ಟಣದ ಯುವಕ ಪರೇಶ್ ಮೇಸ್ತನ ಅನುಮಾನಾಸ್ಪದ ಸಾವಿನ ಪ್ರಕರಣದ ಶೀಘ್ರ ತನಿಖೆಗೆ ಒತ್ತಾಯಿಸಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ತೆಂಗೇರಿ ನೇತೃತ್ವದಲ್ಲಿ ಇಲ್ಲಿನ ಶರಾವತಿ ವೃತ್ತದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡರು.
ಕೇಂದ್ರದ ಮೋದಿ ಸರಕಾರದ ಅಧೀನದಲ್ಲಿರುವ ಸಿಬಿಐಗೆ ಪರೇಶ್ ಮೇಸ್ತನ ಸಾವಿನ ತನಿಖೆಯ ಜವಾಬ್ದಾರಿ ನೀಡಿದರೆ ವಾರದಲ್ಲಿ ನ್ಯಾಯ ಕೊಡಿಸುವುದಾಗಿ ಬಿಜೆಪಿ ಮುಖಂಡರು ಭರವಸೆ ನೀಡಿದ್ದರು. ಆದರೀಗ ಏಳು ತಿಂಗಳು ಕಳೆದರೂ ಈ ಕುರಿತು ಸೊಲ್ಲೆತ್ತುತ್ತಿಲ್ಲ. ಇದನ್ನು ಖಂಡಿಸಿ ಹೋರಾಟ ನಡೆಸುತ್ತಿದ್ದೇವೆ ಎಂದು ಈ ವೇಳೆ ಅವರು ತಿಳಿಸಿದರು. ಸಚಿವ ಆರ್.ವಿ.ದೇಶಪಾಂಡೆ, ಮಾಜಿ ಶಾಸಕಿ ಶಾರದಾ ಶೆಟ್ಟಿ ಮತ್ತು ಸಾರ್ವಜನಿಕರ ಒತ್ತಾಯದ ಮೇರೆಗೆ ಅಂದಿನ ಸಿದ್ದರಾಮಯ್ಯ ನೃತೃತ್ವದ ಕಾಂಗ್ರೆಸ್ ಸರಕಾರ ಘಟನೆ ನಡೆದ ಐದೇ ದಿನದಲ್ಲಿ ಈ ಪ್ರಕರಣವನ್ನು ಸಿಬಿಐಗೆ ನೀಡಿದೆ. ಆದರೆ ಜಿಲ್ಲೆಯವರೇ ಆಗಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆಯ ವರು ಶೀಘ್ರ ತನಿಖೆಗೆ ಒತ್ತಾಯಿಸದೇ, ಮುಂದಿನ ಲೋಕಸಭಾ ಚುನಾವಣೆಯ ವರೆಗೂ ಸಾವಿನ ನಿಗೂಢತೆಯನ್ನು ಜೀವಂತ ವಾಗಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾರ. ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಪಡೆದ ರಾಜಕೀಯ ಲಾಭವನ್ನು ಲೋಕಸಭಾ ಚುನಾವಣೆಯಲ್ಲಿಯೂ ಪಡೆದುಕೊಳ್ಳಲು ಹವಣಿಸುತ್ತಿದ್ದಾರೆ ಎಂದು ಆರೋಪಿಸಿದರು. ಈ ಉಪವಾಸ ಸತ್ಯಾಗ್ರಹದ ಬಳಿಕ 15 ದಿನದಲ್ಲಿ ನಮ್ಮ ಬೇಡಿಕೆಗೆ ಸಂಬಂಧಿತರು ಸ್ಪಂದಿಸದಿದ್ದಲ್ಲಿ "ಹೊನ್ನಾವರ ಬಂದ್"ಆಚರಿಸಿ ಕೇಂದ್ರದ ಸಿಬಿಐ ಮೇಲೆ ಒತ್ತಡ ಹೇರಲಾಗುವುದು.ಅದಕ್ಕೂ ಮಣಿಯದಿದ್ದಲ್ಲಿ ಪಾದಯಾತ್ರೆಯ ಮೂಲಕ "ಕಾರವಾರ ಚಲೋ" ಹಮ್ಮಿಕೊಂಡು ನ್ಯಾಯ ಸಿಗುವವರೆಗೂ ನಿರಂತರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.