Publish Date: Sun, 08 Jul 2018 (14:50 IST)
Updated Date: Sun, 08 Jul 2018 (14:56 IST)
9 ದಿನದ ಹಿಂದೆ ವಿವಾಹವಾಗಿದ್ದ ನವ ವಿವಾಹಿತೆಯೊಬ್ಬಳನ್ನು ವ್ಯಕ್ತಿಯೊಬ್ಬ ಅಪಹರಿಸಿರುವ ಕುರಿತು ಅಪಹರಣಕ್ಕೊಳಗಾದ ವಿವಾಹಿತಳ ಪತಿ ಇಲ್ಲಿನ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾರವಾರ ತಾಲೂಕಿನ ಬಾಡದ ನಿವಾಸಿ ಸಚಿನ್ ನಾಯ್ಕ ಎಂಬುವವರು ಜೂನ್ 28 ರಂದು ಅಂಕೋಲಾ ತಾಲೂಕಿನ ಅವರ್ಸಾದ ದಿವ್ಯಾ ನಾಯ್ಕ ಎಂಬ ಯುವತಿಯನ್ನು ವಿವಾಹವಾಗಿದ್ದರು.ವಿವಾಹದ ಬಳಿಕ ಅನ್ಯೋನ್ಯವಾಗಿದ್ದ ಈ ದಂಪತಿ ಜುಲೈ 2 ಮತ್ತು 3ಕ್ಕೆ ಗ್ರಾಮ ದೇವರು,ಕುಲ ದೇವರಿಗೆ ಪೂಜೆ ಸಲ್ಲಿಸಿ ಬಂದಿದ್ದರು.
ಅದರ ಬಳಿಕ ಜುಲೈ 4 ರಂದು ದಿವ್ಯಾಳ ತವರು ಮನೆಗೆ ನೆಂಟರ ಊಟಕ್ಕೆಂದು ತೆರಳಿದ್ದ ದಂಪತಿಗೆ,ಸಂಪ್ರದಾಯದಂತೆ ನವ ವಧು ಐದು ದಿನ ತವರು ಮನೆಯಲ್ಲೇ ಇರಬೇಕೆಂದು ದಿವ್ಯಾಳ ಕುಟುಂಬದವರು ತಿಳಿಸಿದ್ದಾರೆ. ಅದರಂತೆ ದಿವ್ಯಾಳನ್ನು ತವರು ಮನೆಯಲ್ಲೇ ಬಿಟ್ಟು ಸಚಿನ್ ಮನೆಗೆ ವಾಪಾಸಾಗಿದ್ದಾನೆ.
ತದ ನಂತರ ಜುಲೈ 6 ರ ಬೆಳಿಗ್ಗಿನವರೆಗೂ ಕರೆ ಮಾಡಿ ಮಾತನಾಡಿದ ದಿವ್ಯಾ 6 ರ ಸಂಜೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಾಳೆ.ಬಟ್ಟೆ ಹೊಲಿಯಲು ಕೊಟ್ಟು ಬರುವುದಾಗಿ ತವರು ಮನೆಯಿಂದ ಹೊರಟ ದಿವ್ಯಾ ಈವರೆಗೂ ವಾಪಾಸಾಗಿಲ್ಲ. ಆದರೆ, ಜುಲೈ 7ರಂದು ಗದಗ ಮೂಲದ ದಿಲನ್ ಎಂಬುವವನು ಸಚಿನ್ ಗೆ ಕರೆಮಾಡಿ, ದಿವ್ಯಾಳನ್ನು ಅಪಹರಿಸಿರುವುದಾಗಿ ಹಾಗೂ ಆಕೆಯನ್ನು ಹುಡುಕಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿದ್ದಾನೆ.
ಇದರಿಂದಾಗಿ ಭಯಭೀತರಾಗಿರುವ ಸಚಿನ್ ಕುಟುಂಬ ದಿವ್ಯಾಳನ್ನು ಹುಡುಕಿಕೊಡುವಂತೆ ಅಂಕೋಲಾ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಅವಳ ಮೈಮೇಲೆ ಒಡವೆಗ ಳಿದ್ದು, ಅವುಗಳಿಗಾಗಿ ಅಥವಾ ಇನ್ಯಾವುದೋ ಕಾರಣಕ್ಕೆ ಆಕೆಯನ್ನು ಅಪಹರಿಸಿರಬಹುದು ಎಂದು ಸಚಿನ್ ಅಭಿಪ್ರಾಯಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.