ಬೆಂಗಳೂರು: ಕಾಂಗ್ರೆಸ್ ವಿರೋಧ ಪಕ್ಷವಾಗಿರುವುದರಿಂದ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆ ವಿರೋಧ ವ್ಯಕ್ತಪಡಿಸುವುದು ವಿಶೇಷವಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಸರಕಾರ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ತಿಳಿಸಿದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆಗೆ 3000-3500 ರೂ.ಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದರ ಮೂಲಕ ಬಿಜೆಪಿ ಸರಕಾರ ವಸೂಲಿಗೆ ಇಳಿದಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, ಇದು ತಂತ್ರಜ್ಞಾನ ಆಧಾರಿತ. 500 ರೂ.ಗೂ ಪರೀಕ್ಷೆ ಆಗುತ್ತದೆ. ಇನ್ನೂ ತ್ವರಿತವಾಗಿ ಪರೀಕ್ಷೆ ಮಾಡಬೇಕಾದರೆ ವಿಶೇಷ ಉಪಕರಣಗಳನ್ನು ಬಳಸಬೇಕು. ಅದಕ್ಕಾಗಿ ಹೆಚ್ಚಿನ ಶುಲ್ಕ ವಿಧಿಸಲಾಗುತ್ತಿದೆ. ನಮ್ಮಲ್ಲಿ ಕಡಿಮೆ ಇದೆ. ತಮಿಳುನಾಡು, ಬೇರೆ ಬೇರೆ ರಾಜ್ಯಗಳಲ್ಲಿ ನಮಗಿಂತಲೂ ಜಾಸ್ತಿ ಇದೆ ಎಂದು ಸ್ಪಷ್ಟಪಡಿಸಿದರು.
ಡಿ. 14ರಂದು ಯುಪಿ ಪ್ರವಾಸ
ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಾರ್ಟಿಯ ಮುಖ್ಯಮಂತ್ರಿಗಳ ಕಾನ್ಫರೆನ್ಸ್ ಏರ್ಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅದರಲ್ಲಿ ಭಾಗವಹಿಸುವುದಕ್ಕೆ ಒಂದು ದಿನ ಪ್ರವಾಸ ಕೈಗೊಳ್ಳುತ್ತಿದ್ದೇನೆ. ಡಿ. 13ರಂದು ಸಂಜೆ ಬೆಂಗಳೂರಿಂದ ಹೊರಡು, ಮರುದಿನ ಸಂಜೆ ವಾಪಸ್ಸಾಗುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.