ದಂಪತಿಯ ಜೋಡಿ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯೊಬ್ಬನನ್ನ ಬಂಧನ ಮಾಡಿದ್ದಾರೆ. ಆದರೆ ಕೊಲೆಯಲ್ಲಿ ಇನ್ನೂ ಹೆಚ್ಚು ಜನರು ಭಾಗಿಯಾಗಿದ್ದು, ತನಿಖೆ ನಡೆಸುವಂತೆ ಊರಿನ ಜನರು ಒತ್ತಾಯ ಮಾಡ್ತಿದ್ದಾರೆ.
ಮಂಡ್ಯದ ರಾಯಸಮುದ್ರ ಗ್ರಾಮದಲ್ಲಿ ನಡೆದಿರುವ ಗುಂಡೇಗೌಡ- ಲಲಿತಮ್ಮ ದಂಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಕದ ಮನೆಯವನಾದ ಯೋಗೇಶ್ ನನ್ನ ಪೊಲೀಸರು ಬಂಧನ ಮಾಡಿದ್ದಾರೆ. ಆದರೆ ಯೋಗೇಶ್ ಒಬ್ಬನಿಂದ ಮಾತ್ರ ಈ ಜೋಡಿ ಕೊಲೆ ನಡೆದಿಲ್ಲ. ಯೋಗೇಶ್ ನೊಂದಿಗೆ ಹಲವಾರು ಜನರು ಈ ಕೊಲೆ ಪ್ರಕರಣದಲ್ಲಿ ಶಾಮೀಲಾಗಿರುವ ಶಂಕೆ ಹಾಗೂ ಅನುಮಾನವಿದೆ. ಹೀಗಾಗಿ ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆಯನ್ನು ನಡೆಸಬೇಕು.
ಹೀಗಂತ ಗ್ರಾಮಸ್ಥರು ಆಗ್ರಹಿಸಿ ಊರಿಗೆ ಭೇಟಿ ನೀಡಿದ್ದ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಮತ್ತು ಸಬ್ ಇನ್ಸ್ ಪೆಕ್ಟರ್ ಹೆಚ್.ಎಸ್.ವೆಂಕಟೇಶ್ ಅವರಿಗೆ ಮುತ್ತಿಗೆಹಾಕಿದ್ರು.
ಆಗ ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು ಗ್ರಾಮಸ್ಥರನ್ನು ಸಮಾಧಾನಪಡಿಸಿದ್ರು. ಹದಿನೈದು ದಿನಗಳಲ್ಲಿ ಜೋಡಿಕೊಲೆ ಪ್ರಕರಣದ ಸಂಪೂರ್ಣ ವಿವರವನ್ನು ನೀಡುತ್ತಾರೆ. ಸಹಕರಿಸಿ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಗ್ರಾಮಸ್ಥರು ಕೈಬಿಟ್ಟರು.