ಭಾರತದ ಸರ್ವೋಚ್ಛ ನ್ಯಾಯಾಲಯವು ಕಳೆದ ಅಕ್ಟೋಬರ್ 23, 30 ಹಾಗೂ 31ರಂದು ನೀಡಿದ ತೀರ್ಪಿನನ್ವಯ ದೀಪಾವಳಿ ಹಬ್ಬದ ಸಂದರ್ಭದಲ್ಲಿ 2018ರ ನವೆಂಬರ್-5(ಧನತೇರಸ್), ನವೆಂಬರ್-6(ನರಕ ಚತುರ್ದಶಿ), ನವೆಂಬರ್-7(ದೀಪಾವಳಿ ಅಮಾವಾಸ್ಯೆ) ಹಾಗೂ ನವೆಂಬರ್-8(ಬಲಿಪಾಡ್ಯಮಿ) ದಿನಗಳಂದು ಸಾರ್ವಜನಿಕರು ನಿಗದಿಪಡಿಸಿದ ಸಮಯದಲ್ಲಿ ಮಾತ್ರ ಪಟಾಕಿ ಸಿಡಿಸಬಹುದಾಗಿದೆ.
ಆಯಾ ದಿನಗಳಂದು ರಾತ್ರಿ 8 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಬಹುದಾಗಿದ್ದು, ಸಾರ್ವಜನಿಕರು ಇದಕ್ಕೆ ಸಹಕರಿಸಬೇಕೆಂದು ಕಲಬುರಗಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದ್ದಾರೆ.
ನಿಷೇಧಿತ ಪಟಾಕಿ ಹೊರತುಪಡಿಸಿ ಇನ್ನುಳಿದ ಸ್ಪೋಟಕ ಪಟಾಕಿಗಳನ್ನು ಅಧಿಕೃತವಾಗಿ ಪರವಾನಿಗೆ ಪಡೆದ ಮಾರಾಟಗಾರರು ಮಾತ್ರ ಪಟಾಕಿಗಳನ್ನು ಮಾರಾಟ ಮಾಡಬೇಕು. ಪರವಾನಿಗೆ ಹೊಂದದ ಪಟಾಕಿ ಮಾರಾಟ ಮಾಡುವ ಅಂಗಡಿಗಳಿಂದ ಪಟಾಕಿಗಳನ್ನು ಸಾರ್ವಜನಿಕರು ಖರೀದಿಸಬಾರದು. ದೀಪವಾಳಿ ಹಬ್ಬದ ಸಂಬಂಧ ರಾತ್ರಿ 8 ಗಂಟೆಯಿಂದ 10 ಗಂಟೆ ವರೆಗೆ ಮಾತ್ರ ಪಟಾಕಿ ಸಿಡಿಸಬಹುದು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಬ್ಬ ಆರಂಭವಾಗುವ 7 ದಿನಗಳ ಮೊದಲು ಹಾಗೂ ಹಬ್ಬದ ನಂತರದ 7 ದಿನಗಳು ಸೇರಿದಂತೆ ಒಟ್ಟು 14 ದಿನಗಳ ಕಾಲ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಪಟಾಕಿ ಸಿಡಿಸುವುದರ ಮೇಲೆ ಮೇಲ್ವಿಚಾರಣೆ ನಡೆಸಬೇಕು.
ಜಿಲ್ಲೆಯ ಸ್ಥಳೀಯ ಸಂಸ್ಥೆ, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಾಮೂಹಿಕವಾಗಿ ಪಟಾಕಿ ಸಿಡಿಸುವ ಸಾಧ್ಯತೆ ಬಗ್ಗೆಯೂ ಸ್ಥಳೀಯ ಆಡಳಿತ ಪರಿಶೀಲಿಸಿ ಅಗತ್ಯ ಮುನ್ನೆಚರಿಕೆ ಕ್ರಮ ಕೈಗೊಳ್ಳಬೇಕು. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಸರ್ವೋಚ್ಛ ನ್ಯಾಯಾಲಯದ ದಿನಾಂಕ: 23/31-10-2018ರ ಆದೇಶವನ್ನು ಪಾಲಿಸಲು ಸೂಕ್ತ ಕ್ರಮವಹಿಸಬೇಕು.
ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಶಾಂತ ರೀತಿಯಿಂದ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ದೀಪಾವಳಿ ಹಬ್ಬವನ್ನು ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ಆಚರಿಸಬೇಕು. ಎಲ್ಲ ಇಲಾಖೆಗಳು ಪ್ರಮುಖವಾಗಿ ಪೊಲೀಸ್ ಇಲಾಖೆಯು ಪಟಾಕಿ ಸಿಡಿತ ಪ್ರಕ್ರಿಯೆಯು ನಿಗದಿತ ಅವಧಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು ಎಂದವರು ತಿಳಿಸಿದ್ದಾರೆ.