ವಾಸ್ತವ್ಯ ಪ್ರಮಾಣ ಪತ್ರ (ಓಸಿ) ಇಲ್ಲದ ಕಾರಣಕ್ಕೆ ವಿದ್ಯುತ್ ಸಂಪರ್ಕ ನಿರಾಕರಿಸಲ್ಪಟ್ಟಿದ್ದ ಬೆಂಗಳೂರಿನ ನಾಗರಿಕರಿಗೆ ರಾಜ್ಯ ಸರಕಾರ ಸಿಹಿ ಸುದ್ದಿ ನೀಡಿದೆ.
ವಿದ್ಯುತ್ ಸಂಪರ್ಕ ಪಡೆಯುವುದಕ್ಕೆ ಓಸಿ ಕಡ್ಡಾಯ ಎಂಬ ನಿಯಮವನ್ನು ತೆಗೆದು ಹಾಕಲಾಗಿದ್ದು, ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಹೊರಡಿಸಿದ್ದ ತಿದ್ದುಪಡಿ ಆದೇಶಕ್ಕೆ ಶುಕ್ರವಾರ ರಾತ್ರಿ ರಾಜ್ಯಪತ್ರ ಹೊರಡಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು ಐದು ಲಕ್ಷ ಕುಟುಂಬಗಳಿಗೆ ಇದರಿಂದ ಅನುಕೂಲವಾಗಲಿದೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಜಾರಿಗೆ ಬಂದಿದ್ದ ಈ ಕತ್ತಲೆ ಭಾಗ್ಯದ ಕಾನೂನನ್ನು ನಮ್ಮ ಸರಕಾರ ಬದಲಾಯಿಸಿದ್ದು, ಎಲ್ಲರ ಮನೆಯಲ್ಲೂ ಬೆಳಕು ಮೂಡಲಿದೆ ಎಂದು ಇಂಧನ, ಕನ್ನಡ- ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಟ್ವೀಟ್ ಮೂಲಕ ಹೊಸ ಆದೇಶದ ಮಾಹಿತಿ ಹಂಚಿಕೊಂಡಿದ್ದಾರೆ.
ನಿರ್ಮಾಣ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂಬ ನೆಪ ನೀಡಿ ಮನೆ, ವಸತಿ ಸಮುಚ್ಚಯಗಳಿಗೆ ಬಿಬಿಎಂಪಿ ವಾಸ್ತವ್ಯ ಪ್ರಮಾಣ ಪತ್ರ ನಿರಾಕರಿಸಿದ್ದರೆ ಅಂಥ ಮನೆ ಹಾಗೂ ಫ್ಲಾಟ್ ಗಳಿಗೆ ವಿದ್ಯುತ್ ಸಂಪರ್ಕ ನೀಡದಂತೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಅಂದಿನ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಆದೇಶ ನೀಡಿದ್ದರು. ಇದರಿಂದ ಸುಮಾರು ಐದು ಲಕ್ಷಕ್ಕೂ ಹೆಚ್ಚು ಕುಟುಂಬಗಳು ವಿದ್ಯುತ್ ಸಂಪರ್ಕವಿಲ್ಲದೇ ತೊಂದರೆಗೆ ಒಳಗಾಗಿದ್ದವು.