ಮತ್ತೆ ಉಕ್ರೇನ್ ವಿರುದ್ಧ ಯುದ್ಧವನ್ನು ತೀವ್ರಗೊಳಿಸಿರುವ ರಷ್ಯಾದ ಆಕ್ರಮಣದಿಂದ ಉಕ್ರೇನ್‌ನಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದೆ. ಈ ಹಿನ್ನೆಲೆಯಲ್ಲಿ ಉಕ್ರೇನ್‌ಗೆ ಪ್ರಯಾಣಿಸದಂತೆ ಹಾಗೂ ಉಕ್ರೇನ್ನಲ್ಲಿದ್ದವರು ಆದಷ್ಟು ಬೇಗ ಉಕ್ರೇನ್ ಬಿಟ್ಟು ಭಾರತಕ್ಕೆ ತೆರಳಲು, ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತನ್ನ ಪ್ರಜೆಗಳಿಗೆ ಸೂಚನೆ ನೀಡಿದೆ. ಉಕ್ರೇನ್‌ನಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ದ್ವೇಷದ ಹಿನ್ನೆಲೆಯಲ್ಲಿ ಭಾರತೀಯ ಪ್ರಜೆಗಳು ಉಕ್ರೇನ್‌ಗೆ ಪ್ರಯಾಣಿಸದಂತೆ ಸೂಚಿಸಲಾಗಿದೆ. ಇದೀಗ ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಇತರೆ ಪ್ರಜೆಗಳು ಲಭ್ಯವಿರುವ ವಿಮಾನಗಳಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ತಕ್ಷಣ ಉಕ್ರೇನ್‌ನಿಂದ ಹೊರಡುವಂತೆ ಸೂಚಿಸಲಾಗಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿನ್ನೆ 4 ಉಕ್ರೇನಿಯನ್ ಪ್ರದೇಶಗಳಲ್ಲಿ ಸಮರ ಕಾನೂನನ್ನು ಘೋಷಿಸಿದ್ದರು. ಅವರ ಆದೇಶವು ಇಂದು ಜಾರಿಗೆ ಬರಲಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರ ಕಚೇರಿ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ.