ದೂರು, ಸಲಹೆ ಹಾಗೂ ಅನ್ಯಾಯ ಸೇರಿ ಇನ್ನಿತರ ಮಾಹಿತಿ ನೀಡಲು ಇನ್ನು ಮುಂದೆ ಸಾರ್ವಜನಿಕರು ತುರ್ತು ಸಹಾಯವಾಣಿ 112ಗೆ ಕರೆ ಮಾಡಬೇಕಾದ ಅಗತ್ಯವಿಲ್ಲ. ವಾಟ್ಸಾಪ್ ಮೂಲಕವೂ ಸಹ ದೂರು ಅಥವಾ ವಿಡಿಯೋ ಹಂಚಿಕೊಳ್ಳಲು ಸಾಧ್ಯವಿದೆ ಎಂದು ನಗರ ಪೊಲೀಸ್ ಆಯುಕ್ತರು ಟ್ವೀಟ್ ಮಾಡಿದ್ಧಾರೆ. ಅಪರಾಧ ಸೇರಿದಂತೆ ಇನ್ನಿತರ ತುರ್ತು ಮಾಹಿತಿಗಳನ್ನು ತಿಳಿಸಲು ಇಷ್ಟು ವರ್ಷಗಳ ಕಾಲ ನಗರದ ಜನರು 112 ಸಂಖ್ಯೆಗೆ ಕರೆ ಮಾಡುತ್ತಿದ್ದರು. ಸಂಬಂಧಪಟ್ಟ ಪೊಲೀಸರಿಗೆ, ಠಾಣೆಗಳಿಗೆ ಕಂಟ್ರೋಲ್ ರೂಮ್ ಸಿಬ್ಬಂದಿ ಮಾಹಿತಿ ನೀಡುತ್ತಿದ್ದರು. ಆ ನಂತರವಷ್ಟೇ ಪೊಲೀಸರು ದೂರಿಗೆ ಸ್ಪಂದಿಸುತ್ತಿದ್ದರು. ಸಾರ್ವಜನಿಕರ ದುಃಖ, ದುಮ್ಮಾನಗಳಿಗೆ ಇನ್ನಷ್ಟು ತ್ವರಿತವಾಗಿ ಸ್ಪಂದಿಸಲು ವಾಟ್ಸಾಪ್ ಮೊರೆ ಹೋಗಿದ್ದು, ಇನ್ನು ಮುಂದೆ 940801000 ಗೆ ಜಸ್ಟ್ ಒಂದು ಕರೆ ಮಾಡಿದರೆ ಸಾಕು ಸಂಬಂಧಪಟ್ಟ ಆಯಾ ವಿಭಾಗದ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಟ್ವೀಟ್ ಮಾಡಿದ್ದಾರೆ.