ಆಮ್ ಆದ್ಮಿ ಪಕ್ಷದಿಂದ ಕೆ.ಟಿ.ಶ್ರೀಕಂಠೇಗೌಡರು ಸಿಎಂ ಅಭ್ಯರ್ಥಿಯಾದರೆ?!
ಹೀಗೊಂದು ಸ್ವಾರಸ್ಯಕರ ಚರ್ಚೆಗೆ ಮೇಲ್ಮನೆ ವೇದಿಕೆಯಾಯಿತು. ಬಜೆಟ್ ಕುರಿತು ಸೋಮವಾರ ಮಾತನಾಡುತ್ತಿದ್ದ ಜೆಡಿಎಸ್ನ ಶ್ರೀಕಂಠೇಗೌಡ, ಉತ್ತಮ ಶಿಕ್ಷಣ ನೀಡಲು ದೆಹಲಿಯಲ್ಲಿ ಕ್ರೇಜಿವಾಲ್ ಅವರಿಗೆ ಸಾಧ್ಯವಾಗುವುದಾದರೆ, ನಮಗೇಕೆ ಸಾಧ್ಯವಿಲ್ಲ?
ಎಲ್ಲಾ ರಾಜ್ಯಗಳಿಗೂ ಕೇಜ್ರಿವಾಲ್ ಬರಬೇಕೆ? ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಬ್ಯಾಂಕ್ ಸೇರಿ ಕೆಲ ಕ್ಷೇತ್ರಗಳನ್ನೂ ರಾಷ್ಟ್ರೀಕರಣ ಮಾಡಿದರು. ಎಲ್ಲರಿಗೂ ಸಮಾನವಾದ ಉಚಿತ ಶಿಕ್ಷಣ ಸಿಗುವಂತೆ ಶಿಕ್ಷಣ ಕ್ಷೇತ್ರವನ್ನು ಬಿಜೆಪಿ ರಾಷ್ಟ್ರೀಕರಣ ಮಾಡಲಿ ಎಂದು ಸಲಹೆ ನೀಡಿದರು.
ಶ್ರೀಕಂಠೇಗೌಡರ ಮಾತಿಗೆ ಕೆರಳಿದ ಬಿಜೆಪಿ ಸದಸ್ಯರು, ಹಾಗಾದರೆ ನೀವು ಎಎಪಿ ಪಕ್ಷ ಸೇರಿಕೊಳ್ಳುವುದು ಒಳಿತು ಎಂದು ಸಲಹೆ ನೀಡಿದರು. ತಕ್ಷಣವೇ ಪ್ರತಿಕ್ರಿಯಿಸಿದ ಶ್ರೀಕಂಠೇಗೌಡರು, ಅದಕ್ಕೇನಂತೆ ನನ್ನನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಲಿ ಎನ್ನುತ್ತಿದಂತೆ ಸದನ ನಗೆಗಡಲಲ್ಲಿ ಮುಳುಗಿತು.