Publish Date: Mon, 18 Feb 2019 (14:55 IST)
Updated Date: Mon, 18 Feb 2019 (15:00 IST)
ಮನೆಯಲ್ಲಿದ್ದ ವೇಳೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಬೆಂಕಿ ತಗುಲಿ ನವವಿವಾಹಿತ ಮಹಿಳೆ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಮಾಬುಕಳ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಅಶ್ವಿನಿ ಕುಂದರ್ (26) ಮೃತ ದುರ್ದೈವಿ. ಉಡುಪಿ ಮೂಲದ ಯುವಕನೊಂದಿಗೆ ಕಳೆದ ಎರಡು ತಿಂಗಳ ಹಿಂದಷ್ಟೆ ವಿವಾಹವಾಗಿದ್ದ ಅಶ್ವಿನಿ ಪಡುಕೆರೆ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿದ್ದರು. ವಿವಾಹದ ಬಳಿಕ ಪತಿಯ ಮನೆಯಲ್ಲಿದ್ದ ಯುವತಿ, ಮಾಬುಕಳದ ತಾಯಿ ಮನೆ ಬಳಿ ನಡೆಯಲಿದ್ದ ದೈವಸ್ಥಾನದ ಜಾತ್ರೆ ಹಿನ್ನೆಲೆಯಲ್ಲಿ ಮನೆಗೆ ಆಗಮಿಸಿದ್ದರು.
ರಾತ್ರಿ ವೇಳೆ ಮನೆ ಹೊರಭಾಗದಲ್ಲಿ ಮೊಬೈಲ್ ಫೋನಿನಲ್ಲಿ ಮಾತನಾಡುತ್ತಿದ್ದ ವೇಳೆ ಬೆಂಕಿ ಅವಘಡ ಸಂಭವಿಸಿದ್ದು ಸಮೀಪದ ಹುಲ್ಲು ಶೇಖರಿಸಿಟ್ಟ ರಾಶಿಗೂ ಬೆಂಕಿ ತಗುಲಿದೆ.
ಮೇಲ್ನೋಟಕ್ಕೆ ಮೊಬೈಲ್ ಸ್ಫೋಟವಾಗಿ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗುತ್ತಿದ್ದು ಗಂಭೀರ ಗಾಯಗೊಂಡ ಅಶ್ವಿನಿ ಅವರನ್ನು ಮಂಗಳೂರು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು.
ಚಿಕಿತ್ಸೆ ಪಡೆಯುತ್ತಿದ್ದ ಅವರು ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕೋಟ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.