ಶಾಲಾ ಮಕ್ಕಳ ಮೇಲೆ ದೌರ್ಜನ್ಯ ಪ್ರಕಣಗಳ ತಡೆಗೆ ಶಿಕ್ಷಣ ಇಲಾಖೆ ನಿಯಮ ಜಾರಿ ಮಾಡಿ ಆದೇಶಿಸಿದೆ. ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಶಾಲಾ ವಾಹನಗಳ ಚಾಲಕರು ಪೊಲೀಸ್ ಠಾಣೆಗಳಿಂದ ಅವರ ನಡತೆಯ ಬಗ್ಗೆ ನಡವಳಿಕೆ ಪ್ರಮಾಣ ಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಿ ಶಿಕ್ಷಣ ಇಲಾಖೆ ಆದೇಶಿಸಿದೆ.
ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1999ಕ್ಕೆ ತಿದ್ದುಪಡಿ ತಂದು ಖಾಸಗಿ ಒಪ್ಪಂದ ವಾಹನಗಳಲ್ಲಿ ಶಾಲಾ ಮಕ್ಕಳಿಗೆ ಸಾರಿಗೆ ಸೌಲಭ್ಯ ಒದಗಿಸುವ ಸಲುವಾಗಿ ಅಧಿಸೂಚನೆ ಹಾಗೂ ಸ್ಕೂಲ್ ಕ್ಯಾಬ್ ಸೇಫ್ಟಿ ಕಮಿಟಿ ರಚಿಸಲು ಕಛೇರಿಯಿಂದ ಸುತ್ತೋಲೆ ಹೊರಡಿಸಿದ್ದು, ನಡುವಳಿಕೆ ಪತ್ರವನ್ನ ಆಯಾ ಶಾಲೆಯ SATS ನಲ್ಲಿ ಅಪ್ಡೇಟ್ ಮಾಡಬೇಕು. ಮಕ್ಕಳನ್ನು ಮನೆಯಿಂದ ಶಾಲೆಗೆ ಹಾಗೂ ಶಾಲೆಯಿಂದ ಮನೆಗೆ ಕರೆತರುವ ಕೆಲಸ ನಿರ್ವಹಿಸಲು ಮಹಿಳಾ ಸಹಾಯಕರನ್ನು ನೇಮಿಸಿಕೊಳ್ಳಬೇಕು.
ಪ್ರತಿ ಖಾಸಗಿ ಶಾಲಾ ವಾಹನದಲ್ಲಿ ಕಡ್ಡಾಯವಾಗಿ ಸಿ.ಸಿ.ಕ್ಯಾಮರಾ ಅಳವಡಿಸಬೇಕು. ವಾಹನದಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಮಕ್ಕಳನ್ನು ಕರೆದೊಯ್ಯಬಾರದು. ಎಲ್ಲಾ ಮಕ್ಕಳನ್ನು ಮನೆಗೆ ಬಿಟ್ಟ ನಂತರ, ಚಾಲಕರು ಶಾಲೆಗೆ ಬಂದು ಹಾಜರಾತಿ ಪುಸ್ತಕದಲ್ಲಿ ಶಾಲಾ ಮುಖ್ಯಸ್ಥರ ಸಮ್ಮುಖದಲ್ಲಿ ಕಡ್ಡಾಯವಾಗಿ ಸಹಿ ಮಾಡಬೇಕು. ಒಂದು ವೇಳೆ ಈ ನಿಯಮ ಉಲ್ಲಂಘಿಸಿದ್ರೆ ಶಿಸ್ತು ಕ್ರಮದ ಎಚ್ಚರಿಕೆಯನ್ನ ಶಿಕ್ಷಣ ಇಲಾಖೆ ಕೊಟ್ಟಿದೆ.