ಬೆಂಗಳೂರು: ಪೀಣ್ಯ ಮತ್ತು ನಾಗಸಂದ್ರ ನಡುವೆ ಮೂರು ದಿನ ಮೆಟ್ರೋ ರೈಲು ಸೇವೆ ಇರಲ್ಲ ಎಂದು ಬೆಂಗಳೂರು ಮೆಟ್ರೋ ರೈಲ್ವೇ ನಿಗಮ ಮಾಹಿತಿ ನೀಡಿದೆ.
ಮೆಟ್ರೋದಲ್ಲಿ ಓಡಾಡುವ ಪೀಣ್ಯ ಮತ್ತು ಸುತ್ತಮುತ್ತಲಿನ ಜನರಿಗೆ ಇದು ನಿರಾಸೆಯ ಸುದ್ದಿಯಾಗಿದೆ. ಈ ವಾರ ವೀಕೆಂಡ್ ನಲ್ಲಿ ಹೆಚ್ಚುವರಿ ರಜೆಯಿದ್ದು, ಈ ವಾರದಲ್ಲಿ ಮೆಟ್ರೋದಲ್ಲಿ ಓಡಾಡುವವರಿಗೆ ಕೊಂಚ ಮಟ್ಟಿಗೆ ತೊಂದರೆಯಾಗಲಿದೆ. ಆದರೆ ಈ ಮೂರು ದಿನದ ವ್ಯತ್ಯಯಕ್ಕೆ ಕಾರಣವೂ ಇದೆ.
ನಾಳೆ ಅಂದರೆ ಜನವರಿ 26 ರಿಂದ ಜನವರಿ 28 ರವರೆಗೆ ತಾತ್ಕಾಲಿಕವಾಗಿ ಮೂರು ದಿನ ಈ ಹಸಿರು ಮಾರ್ಗದಲ್ಲಿ ಮೆಟ್ರೋ ಇರಲ್ಲ. ಜನವರಿ 29 ರಂದು ಬೆಳಿಗ್ಗೆ 5 ಗಂಟೆಯಿಂದ ಎಂದಿನಂತೆ ಮೆಟ್ರೋ ಓಡಾಟ ನಡೆಸಲಿದೆ ಎಂದು ಬಿಎಂಆರ್ ಸಿಎಲ್ ಪ್ರಕಟಣೆ ನೀಡಿದೆ.
ಮೆಟ್ರೋದ ಎರಡನೇ ಹಂತದ ಕಾಮಗಾರಿ ಇದೀಗ ಜಾರಿಯಲ್ಲಿದೆ. ಅದರಂತೆ ನಾಗಚಂದ್ರದಿಂದ ಮಾದವಾರದವರೆಗೆ ವಿಸ್ತರಿತ ಕಾಮಗಾರಿ ನಡೆಯುತ್ತಿದೆ. ಈ ಕಾರಣಕ್ಕೆ ಮೂರು ದಿನ ಸಂಚಾರ ಸ್ಥಗಿತವಾಗುತ್ತಿದೆ. ಮೆಟ್ರೋ ಇಲ್ಲದ ಕಾರಣ ಈ ಮೂರು ದಿನ ಪೀಣ್ಯ ವಲಯದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ‍್ಯತೆಯಿದೆ.
ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವವರು ಉದ್ಯೋಗಸ್ಥರೇ ಹೆಚ್ಚಾಗಿರುತ್ತಾರೆ. ಅದರಲ್ಲೂ ಸಂಜೆ ಮತ್ತು ಬೆಳಿಗ್ಗೆ ಟ್ರಾಫಿಕ್ ದಟ್ಟಣೆಯಿಲ್ಲದೇ ಮನೆ ತಲುಪಲು ಹೆಚ್ಚಿನವರು ಮೆಟ್ರೋವನ್ನು ಆಶ‍್ರಯಿಸುತ್ತಾರೆ. ಅವರಿಗೆಲ್ಲಾ ಈ ಅಡಚಣೆಯಿಂದ ಕೊಂಚ ಮಟ್ಟಿಗೆ ತೊಂದರೆಯಾಗಬಹುದು. ಆದರೆ ಇಡೀ ಬೆಂಗಳೂರಿಗೆ ಮೆಟ್ರೋ ಸೇವೆ ವಿಸ್ತರಿಸುವ ಬಿಎಂಆರ್ ಸಿಎಲ್ ಯೋಜನೆಯಿಂದಾಗಿ ಕೆಲವೊಮ್ಮೆ ಇಂತಹ ಅಡಚಣೆಯನ್ನು ಎದುರಿಸುವುದು ಅನಿವಾರ್ಯವಾಗುತ್ತದೆ.