ಮೈಸೂರನ್ನು ಪ್ರತಿನಿಧಿಸುವ ಮೈಸೂರ್ ಪಾಕ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಬರಿ ಇಷ್ಟ ಅಲ್ಲ ಮೈಸೂರು ಪಾಕ್ ನೋಡಿದ್ರೇನೇ ಬಾಯಲ್ಲಿ ನೀರೂರಿಸುತ್ತೆ. ಈಗ ವಿಶ್ವದ ಟಾಪ್ 50 ಬೀದಿಬದಿ ತಿಂಡಿ ಲಿಸ್ಟ್ ನಲ್ಲಿ ಸ್ಥಾನ ಪಡೆದಿದೆ. ಸಾಂಸ್ಕೃತಿಕ ನಗರಿ ಮೈಸೂರಿನ ಈ ಸಿಹಿ ತಿನಿಸು ಟೇಸ್ಟ್ ಅಟ್ಲಾಸ್ ಪ್ರಕಟಿಸಿರುವ ಲಿಸ್ಟ್ ನಲ್ಲಿ 14ನೇ ಸ್ಥಾನ ಪಡೆದುಕೊಂಡಿದೆ. ಅಲ್ಲದೇ ವಿಶ್ವದ ಟಾಪ್ 50 ಸ್ಟ್ರೀಟ್ ತಿಂಡಿ ತಿನಿಸುಗಳ ಲಿಸ್ಟ್ ನಲ್ಲಿ ಭಾರತದಿಂದ 3 ತಿಂಡಿಗಳು ಸ್ಥಾನ ಪಡೆದಿವೆ. ಮೈಸೂರು ಪಾಕ್‌ಗೆ 14ನೇ ಸ್ಥಾನ, ಕುಳ್ಳಿ ಹಾಗೂ ಕುಲ್ಪಿಗೆ 18ನೇ ಮತ್ತು ಫಲೂದಾಗೆ 32ನೇ ಸ್ಥಾನದಲ್ಲಿವೆ. ಇನ್ನು ಮೈಸೂರು ಪಾಕ್ ಶತಮಾನದ ಇತಿಹಾಸ ಹೊಂದಿದ್ದು, 90 ವರ್ಷಗಳ ಹಿಂದೆ ಮೈಸೂರು ಅರಸರ ಕಾಲದಲ್ಲಿ ಕಾಕಾಸುರ ಮಾದಪ್ಪ ಎಂಬುವವರು ಅರಮನೆಯ ಮುಖ್ಯ ಬಾಣಸಿಗರಾಗಿದ್ದರು. ಆಗಿನ ರಾಜ ಕೃಷ್ಣರಾಜ ಒಡೆಯರ್ ಅತಿಥಿಗಳು ಬರುತ್ತಿದ್ದಾರೆ ಏನಾದರೂ ಸಿಹಿ ಖಾದ್ಯ ಮಾಡುವಂತೆ ತಿಳಿಸಿದ್ದಾರೆ. ನಂತರ ಮಾದಪ್ಪ ಅವಸರಲ್ಲಿ ಸಕ್ಕರೆ-ತುಪ್ಪ-ಕಡಲೆ ಹಿಟ್ಟಿನ ಮಿಶ್ರಣ ತಯಾರಿಸಿ ಹೊಸ ರೀತಿಯ ಸಿಹಿಯನ್ನು ಬಡಿಸಿದ್ದರ೦ತೆ. ಅರಸರಿಗೆ ಬಹಳ ಇಷ್ಟವಾಗಿ ಪ್ರಶಂಸೆ ಪಡೆದಿದ್ದರು. ಆ ತಿಂಡಿಗೆ 'ಮೈಸೂರ್ ಪಾಕ್' ಎಂಬ ಹೆಸರಿಡಲಾಯಿತು. ಇಂದಿಗೂ ಕೂಡ ದೇಶದಲ್ಲೆಡೆ ಮೈಸೂರು ಪಾಕ್ ಕರ್ನಾಟಕದ ಸಿಹಿ ಪ್ರಿಯರಿಗೆ ಫೇವರೇಟ್ ಆಗಿದೆ.