ಮೈಸೂರು: ಮೈಸೂರು ಅರಮನೆ ದಸರಾ ಸಂಭ್ರಮಕ್ಕೆ ಕರೆತರಲಾಗಿರುವ ಆನೆಗಳು ಕಾದಾಡುತ್ತಾ ರಸ್ತೆಗೇ ಬಂದು ಬಿಟ್ಟಿದ್ದು, ಕೆಲವು ಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು.
ಮೈಸೂರು ದಸರಾಗೆ ತಯಾರಿ ಆರಂಭವಾಗಿದ್ದು, ಆನೆಗಳು ಅರಮನೆ ಆವರಣದಲ್ಲಿ ಬೀಡುಬಿಟ್ಟಿವೆ. ಈ ಪೈಕಿ ಗಜಪಡೆಯ ಕಂಜನ್ ಮತ್ತು ಧನಂಜಯ ಆನೆ ನಡುವೆ ಊಟ ಮಾಡುವ ಸಮಯದಲ್ಲಿ ಕಾದಾಟ ಶುರುವಾಗಿದೆ. ಧನಂಜಯ ಆನೆ ಕಂಜನ್ ಮೇಲೆ ದಾಳಿ ನಡೆಸಿದೆ. ಬೆದರಿದ ಕಂಜನ್ ಆನೆ ಮಾವುತನಿಲ್ಲದೇ ಅರಮನೆಯ ಮುಖ್ಯದ್ವಾರದಿಂದ ನೇರವಾಗಿ ರಸ್ತೆಗೇ ಬಂದಿದೆ. ಅದರ ಹಿಂದೆಯೇ ಧನಂಜಯ ಆನೆ ಕೂಡಾ ಬಂದಿದೆ.
ಇದರಿಂದ ಬೆದರಿದ ಕಂಜನ್ ದೊಡ್ಡಕೆರೆ ಮೈದಾನದ ಗೇಟ್ ತಳ್ಳಿಕೊಂಡು ರಸ್ತೆಯತ್ತ ಓಡಿದೆ. ಧನಂಜಯ ಆನೆ ಮೇಲಿದ್ದ ಮಾವುತ ಕಷ್ಟಪಟ್ಟು ಆತನನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾನೆ. ಧನಂಜಯ ಅಟ್ಟಾಡಿಸುವುದು ನಿಂತಾಗ ಕಂಜನ್ ಆನೆ ಕೂಡಾ ನಿಂತಿದ್ದಾನೆ. ಬಳಿಕ ಮಾವುತ ಎರಡೂ ಆನೆಗಳನ್ನೂ ಉಪಾಯವಾಗಿ ಅರಮನೆ ಆವರಣದೊಳಗೆ ಕರೆದೊಯ್ದಿದ್ದಾನೆ.
ಮಾವುತನ ಸಮಯ ಪ್ರಜ್ಞೆ ಮತ್ತು ಧೈರ್ಯದಿಂದ ಧನಂಜಯ ಆನೆಯನ್ನು ನಿಯಂತ್ರಿಸಲು ಸಾಧ್ಯವಾಯಿತು. ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನಗಳನ್ನು ನೋಡಿ ಕಂಜನ್ ಆನೆಯೂ ಕೊಂಚ ಗಲಿಬಿಲಿಯಾಗಿತ್ತು. ಇಲ್ಲದೇ ಹೋಗಿದ್ದರೆ ದೊಡ್ಡ ಅನಾಹುತವೇ ನಡೆಯುತ್ತಿತ್ತು. ಆನೆಗಳ ಕಾದಾಟದ ವಿಡಿಯೋ ಇಲ್ಲಿದೆ: