ಬೆಂಗಳೂರು, ಸೆ 22 : ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್. ಆರ್. ನಿರಾಣಿ ಟ್ವಿಟ್ಟರ್ ಖಾತೆಯನ್ನು ಹ್ಯಾಕರ್ಗಳು ಹ್ಯಾಕ್ ಮಾಡಿದ್ದಾರೆ.
ಈ ಬಗ್ಗೆ ಸ್ವತಃ ಸಚಿವ ಮುರುಗೇಶ್ ನಿರಾಣಿ ಪ್ರಕಟಣೆ ನೀಡಿದ್ದು, "ನನ್ನ ಟ್ವಿಟರ್ ಖಾತೆ @NiraniMurugesh ಅನ್ನು ಕೆಲವರು ಮಂಗಳವಾರ ಅಜ್ಞಾತ ವಿದೇಶಿ ಸ್ಥಳದಿಂದ ಹ್ಯಾಕ್ ಮಾಡಿದ್ದಾರೆ. ಆರೋಪಿಗಳ ನಿಖರವಾದ ಮೂಲ ಮತ್ತು ಗುರುತು ನಮಗೆ ತಿಳಿದಿಲ್ಲ," ಎಂದು ತಿಳಿಸಿದ್ದಾರೆ.
"ಹ್ಯಾಕರ್ಗಳು ಪೋಸ್ಟ್ ಮಾಡುವ ಯಾವುದೇ ಮೋಸದ ಸಂದೇಶಗಳಿಗೆ ಬಲಿಯಾಗಬೇಡಿ. ನನ್ನ ಖಾತೆಯಲ್ಲಿರುವ ಏನಾದರೂ ಅವಹೇಳನಕಾರಿ ಮತ್ತು ಅಸಂಸದೀಯ ಸಂದೇಶಗಳನ್ನು ನಿರ್ಲಕ್ಷಿಸಿ, ಯಾರೊಬ್ಬರೂ ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡಬೇಡಿ,'' ಎಂದು ಮನವಿ ಮಾಡಿದ್ದಾರೆ.
"ಈ ಬಗ್ಗೆ ಟ್ವಿಟರ್ಗೆ ದೂರು ನೀಡಿಲಾಗಿದ್ದು, ಶೀಘ್ರದಲ್ಲೇ ಬೆಂಗಳೂರಿನ ಸೈಬರ್ ಸೆಲ್ ಪೊಲೀಸರಿಗೆ ದೂರು ನೀಡುತ್ತೇವೆ. ಈ ಮೊದಲು ಕೂಡ ನನ್ನ ಫೇಸ್ಬುಕ್ ಅಕೌಂಟ್ ಹ್ಯಾಕ್ ಮಾಡಿದ್ದರು,'' ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಈ ಹಿಂದೆಯೂ ಸಚಿವ ಮುರುಗೇಶ್ ನಿರಾಣಿ ಫೇಸ್ಬುಕ್ನಲ್ಲಿ ಹಿಂದೂ ದೇವರು ರಾಮನಿಗೆ ಅವಮಾನ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ನಂತರ ಅದಕ್ಕೆ ನಿರಾಣಿ, ಫೇಸ್ಬುಕ್ ಹ್ಯಾಕ್ ಮಾಡಲಾಗಿದೆ ಎಂದು ಸಮಜಾಯಿಸಿ ನೀಡಿದ್ದರು.
ಬಿ.ಎಸ್. ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಮುರುಗೇಶ್ ನಿರಾಣಿ ಹೆಸರು ಕೇಳಿ ಬಂದಿತ್ತು. ಅಚ್ಚರಿ ಬೆಳವಣಿಗೆಯಲ್ಲಿ ಬಸವರಾಜ ಬೊಮ್ಮಾಯಿಯವರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿತ್ತು. ನಂತರ ಬೊಮ್ಮಾಯಿ ಸಂಪುಟದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಸ್ಥಾನ ಪಡೆದಿದ್ದಾರೆ.
ಮರಳಿ ಟ್ವಿಟ್ಟರ್ ಖಾತೆ ಪಡೆದ ನಿರಾಣಿ
ಹೊರದೇಶದ ಅಪರಿಚಿತರಿಂದ ಸಚಿವ ಮುರುಗೇಶ್ ನಿರಾಣಿ ಟ್ವಿಟ್ಟರ್ ಖಾತೆ ಹ್ಯಾಕ್ ಮಾಡಲಾಗಿತ್ತು. ಆದರೆ ಮರಳಿ ಅಧಿಕೃತ ಟ್ವಿಟ್ಟರ್ ಖಾತೆ ಪಡೆದುಕೊಂಡಿದ್ದು, "ಹ್ಯಾಕರ್ಗಳು ಇಂದು ನನ್ನನ್ನು ಹ್ಯಾಕರ್ನಂತೆ ಯೋಚಿಸುವಂತೆ ಮಾಡಿದರು. ಪ್ರತಿ ಯಶಸ್ವಿ ಹ್ಯಾಕರ್ ಹಿಂದೆ, ಹ್ಯಾಕ್ ಅನ್ನು ಅರ್ಥಮಾಡಿಕೊಳ್ಳಲು ಇನ್ನಷ್ಟು ಯಶಸ್ವಿ ಡಿ-ಕೋಡರ್ ಇರುತ್ತಾನೆ. ನಾನು ಮತ್ತೆ ಟ್ವಿಟ್ಟರ್ಗೆ ಬಂದಿದ್ದೇನೆ," ಎಂದು ಹ್ಯಾಕರ್ಗಳಿಗೆ ಟಾಂಗ್ ನೀಡಿದ್ದಾರೆ.