ಮಂಗಳೂರು: ಕಣ್ಮರೆಯಾಗಿದ್ದ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಸೋದರ ಮುಮ್ತಾಜ್ ಅಲಿ ಮೃತದೇಹ ಕೊನೆಗೂ ಪತ್ತೆಯಾಗಿದೆ. ಸಹೋದರನ ಮೃತದೇಹ ನೋಡಿ ಮೊಯಿದ್ದೀನ್ ಬಾವಾ ಕುಟುಂಬ ಕಣ್ಣೀರು ಹಾಕಿದ್ದಾರೆ.
ಸತತ ಎರಡು ದಿನಗಳಿಂದ ಮುಮ್ತಾಜ್ ಅಲಿ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಸುಳಿವೇ ಸಿಕ್ಕಿರಲಿಲ್ಲ.ಇದರಿಂದ ಕುಟುಂಬಸ್ಥರು ಕಂಗೆಟ್ಟಿದ್ದರು. ಇದೀಗ ಮಂಗಳೂರಿನ ಕುಳೂರಿನ ಸೇತುವೆ ಬಳಿ ಮುಮ್ತಾಜ್ ಶವ ಪತ್ತೆಯಾಗಿದೆ. ಮುಳುಗು ತಜ್ಞರು ಸತತ ಕಾರ್ಯಾಚರಣೆ ನಡೆಸಿ ಮೃತದೇಹ ಹೊರತೆಗೆಯುವಲ್ಲಿ ಸಫಲರಾಗಿದ್ದಾರೆ.
ನಿನ್ನೆ ಮಂಗಳೂರಿನ ಕುಳೂರು ಸೇತುವೆ ಬಳಿ ಮುಮ್ತಾಜ್ ಕಾರು ಪತ್ತೆಯಾಗಿತ್ತು. ಹೀಗಾಗಿ ಇದೇ ಸ್ಥಳದಲ್ಲಿ ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದಲ್ಲಿ ಹುಡುಕಾಟ ನಡೆಸಲಾಗಿತ್ತು. ಫಲ್ಗುಣಿ ನದಿಯಲ್ಲಿ ಸ್ಕೂಬಾ ಡೈವ್ ನಡೆಸಿ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದರು.
ಭಾನುವಾರ ಬೆಳಿಗ್ಗೆ ಮೊಯಿದ್ದೀನ್ ಬಾವಾ ಸಹೋದರ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದರು. ಅವರ ಬಿಎಂಡಬ್ಲ್ಯು ಕಾರು ಕುಳೂರು ಸೇತುವೆ ಬಳಿ ಪತ್ತೆಯಾಗಿದ್ದರಿಂದ ಅವರು ನದಿಗೆ ಹಾರಿರಬಹುದು ಎಂದು ಶಂಕಿಸಲಾಗಿತ್ತು. ಈ ಪ್ರಕರಣದಲ್ಲಿ ಓರ್ವ ಮಹಿಳೆಯ ಕೈವಾಡವಿರುವ ಬಗ್ಗೆಯೂ ಸುದ್ದಿ ಕೇಳಿಬರುತ್ತಿದೆ. ಖಾಸಗಿ ವಿಡಿಯೋ ಇಟ್ಟುಕೊಂಡು ಮಹಿಳೆಯೊಬ್ಬರು ಮುಮ್ತಾಜ್ ಗೆ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.