ಕಾಂಗ್ರೆಸ್ ಹೈ ಕಮಾಂಡ್‌ಗೆ ಕಪ್ಪಕಾಣಿಕೆ ಸಲ್ಲಿಕೆಯಾದ ಬಗ್ಗೆ ವಿವರವುಳ್ಳ ಡೈರಿ ಬಿಡುಗಡೆ ಹಿಂದೆ ಕೇವಲ ಮಾಜಿ ಸಿಎಂ ಯಡಿಯೂರಪ್ಪ ಮಾತ್ರವಿಲ್ಲ. ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಿತೂರಿಯೂ ಇದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಕಿಡಿಕಾರಿದ್ದಾರೆ.
ಕಂದಾಯ ಇಲಾಖೆ ಅಥವಾ ಇಡಿ ಅಧಿಕಾರಿಗಳು ಡೈರಿಯನ್ನು ವಶಪಡಿಸಿಕೊಂಡಿದ್ದರೆ ಅದು ಕಮಲ ನಾಯಕರಿಗೆ ಹೇಗೆ ಸಿಗಲು ಸಾಧ್ಯ. ಅದರಲ್ಲಿನ ವಿವರಗಳು ಬಿಜೆಪಿ ನಾಯಕರಿಗೆ ಗೊತ್ತಾಗುವುದಾದರೂ ಹೇಗೆ. ಅದರಲ್ಲಿನ ಕೈ ಬರಹ ನನ್ನದಲ್ಲ ಎಂದು ಶಾಸಕ ಗೋವಿಂದರಾಜು ಸ್ಪಷ್ಟ ಪಡಿಸಿದ್ದಾರೆ. ಮತ್ತೀಗ ಆ ಕೈ ಬರಹ ಯಾರದ್ದು ಎಂಬುದೇ ಪ್ರಶ್ನೆ ಎಂದರು.
ರಹಸ್ಯ ಡೈರಿ ಸೋರಿಕೆಯಾದ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರಿಂದ ಕೇಂದ್ರ ಸರ್ಕಾರ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ನನ್ನನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸುವ ಮಾತನಾಡುತ್ತಾರೆ. ತಾಕತ್ತಿದ್ದರೆ ಹಾಗೆ ಮಾಡಿ ನೋಡಲಿ ಎಂದು, ಇದೇ ಸಂದರ್ಭದಲ್ಲಿ ಅವರು ತಮ್ಮದೇ ಪಕ್ಷದ ನಾಯಕರಿಗೆ ಸವಾಲು ಹಾಕಿದರು.