ನಗರಸಭೆ ಸದಸ್ಯರು, ಪಟ್ಟಣ ಪಂಚಾಯತ್ ಸದಸ್ಯರಾದರೆ ಸಾಕು ಐಷಾರಮಿ ಕಾರಿನಲ್ಲಿ ಓಡಾಡುವ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ಧಿ ಸಾಮಾನ್ಯ ಪ್ರಯಾಣಿಕರಂತೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಸರಳತೆ ಮೆರೆದಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಶಾಂತಾರಾಮ್ ಸಿದ್ಧಿಯವರು ಸಾಮಾನ್ಯ ಪ್ರಯಾಣಿಕರಂತೆ ಕುಳಿತು ಬಸ್‌ಗಾಗಿ ಕಾಯುತ್ತಿದ್ದರು. ಅವರನ್ನು ನೋಡಿದವರಾರೂ ಇವರು ರಾಷ್ಟ್ರೀಯ ಪಕ್ಷವೊಂದರ ವಿಧಾನ ಪರಿಷತ್ ಸದಸ್ಯರು ಎಂಬುದನ್ನು ಗುರುತಿಸಿಲ್ಲ.
ಸರಳವಾಗಿ ಜೀವನ ನಡೆಸುತ್ತಿರುವ ಶಾಂತಾರಾಮ್ ಸಿದ್ಧಿ ವಿಧಾನ ಪರಿಷತ್ ಸದಸ್ಯರಾದ ಬಳಿಕವೂ ತಮ್ಮ ಓಡಾಡಕ್ಕೆ ಸಾರ್ವಜನಿಕ ಸಂಪರ್ಕವಾದ ಸಾರಿಗೆ ವ್ಯವಸ್ಥೆಯನ್ನೇ ಅವಲಂಬಿಸಿದ್ದಾರೆ. ಮಾತ್ರವಲ್ಲ ಶಾಂತಾರಾಮ್ ಸಿದ್ಧಿಯವರ ಬಳಿ ದುಬಾರಿ ವಾಚ್, ಶೂ, ಫೋನ್, ಬೆಲೆಬಾಳುವ ಉಡುಪು, ಸಹಾಯಕರು ಕೂಡ ಇಲ್ಲ.
ಆಫ್ರಿಕನ್ ಮೂಲದ ಸಿದ್ಧಿ ಸಮುದಾಯದಿಂದ ಕರ್ನಾಟಕದ ಮೊದಲ ವಿಧಾನ ಪರಿಷತ್ ಸದಸ್ಯರಾಗಿರುವ ಶಾಂತಾರಾಮ್ ಸಿದ್ದಿ ಬಸ್‌ಗಾಗಿ ಕಾಯುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಧಾನ ಪರಿಷತ್ ಸದಸ್ಯರಾಗಿದ್ದರೂ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸುತ್ತಿರುವ ಇವರ ಸರಳ ಜೀವನಕ್ಕೆ ಇದೀಗ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.