ಬೆಂಗಳೂರು: ರಸ್ತೆ ಗುಂಡಿ ಬಗ್ಗೆ ಪ್ರಶ್ನೆ ಕೇಳಿದ್ರೆ ಪತ್ರಕರ್ತರಿಗೇ ಬಿಜೆಪಿಗೆ ಸೇರಿಕೊಳ್ಳಿ ಎಂದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿರುದ್ದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ನಿನ್ನೆ ಮಾಧ್ಯಮಗಳೊಂದಿಗೆ ಪ್ರದೀಪ್ ಈಶ್ವರ್ ಮಾತನಾಡುತ್ತಿದ್ದರು. ಈ ವೇಳೆ ರಸ್ತೆ ಗುಂಡಿ ವಿರುದ್ಧ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಕೇಳಾಯಿತು. ಆಗ ಪ್ರದೀಪ್ ಈಶ್ವರ್ ಯಾಕೆ ಬಿಜೆಪಿ ಅವಧಿಯಲ್ಲಿ ಗುಂಡಿ ಇರಲಿಲ್ವಾ? ದೆಹಲಿಯಲ್ಲಿ ರಸ್ತೆ ಗುಂಡಿ ಇಲ್ವಾ ಎಂದೆಲ್ಲಾ ಮರು ಪ್ರಶ್ನೆ ಮಾಡಿದರು.
ಆಗ ಪತ್ರಕರ್ತರೊಬ್ಬರು ಅಲ್ಲಿ ಇಲ್ಲಿ ಏನಾಗುತ್ತಿದೆ ಎಂದಲ್ಲ, ನಮ್ಮ ರಾಜ್ಯದ ಸಮಸ್ಯೆಗೆ ಪರಿಹಾರ ಏನು ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಪ್ರದೀಪ್ ಈಶ್ವರ್ ನೀವು ಬಿಜೆಪಿಯವರಾ? ಹೋಗಿ ಬಿಜೆಪಿಗೆ ಸೇರಿಕೊಳ್ಳಿ ಎಂದರು.
ಇದು ಪತ್ರಕರ್ತರನ್ನು ಕೆರಳಿಸಿತು. ಸ್ಥಳದಲ್ಲೇ ಪ್ರದೀಪ್ ಈಶ್ವರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವುದು, ಪ್ರಶ್ನೆ ಮಾಡುವುದು ನಮ್ಮ ಕೆಲಸ. ಅಷ್ಟಕ್ಕೇ ನೀವು ನಮಗೆ ಬಿಜೆಪಿಯವರಾ, ಬಿಜೆಪಿಗೆ ಸೇರಿಕೊಳ್ಳಿ ಎಂದೆಲ್ಲಾ ಕೇಳಬೇಕಾಗಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಬೆಪ್ಪಾದ ಪ್ರದೀಪ್ ಈಶ್ವರ್, ಇಲ್ಲಪ್ಪಾ ಬಿಜೆಪಿಗೆ ಸೇರಿಕೊಂಡರೆ ನಿಮಗೆ ಒಳ್ಳೆ ಭವಿಷ್ಯವಿದೆ. ಅಶೋಕಣ್ಣನಿಗಿಂತಲೂ ಚೆನ್ನಾಗಿ ಮಾತನಾಡುತ್ತೀರಿ ಎಂದೆ ಅಷ್ಟೇ ಎಂದು ಸಮಜಾಯಿಷಿ ಕೊಡಲು ಬಂದರು. ಆದರೆ ಅವರ ಮಾತುಗಳು ಪತ್ರಕರ್ತರಿಗೆ ಸಮಾಧಾನ ತರಲಿಲ್ಲ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೂ ಸಾಕಷ್ಟು ಟೀಕೆ ಕೇಳಿಬಂದಿದೆ.