ಗ್ಯಾರಂಟಿಗಳ ಸ್ವತಃ ಸಚಿವರಿಗೆ ಮಾಹಿತಿ ಇದ್ದಂತೆ ಕಾಣುತ್ತಿಲ್ಲ. ಅವರೆಲ್ಲರೂ ಅರಬರೆ ಜ್ಞಾನದಿಂದ ಮಾತನಾಡುತ್ತಿದ್ದಾರೆ. ಅದು ಜನತೆಗೂ ಚೆನ್ನಾಗಿ ಅರ್ಥವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ವಿವಿಧ ಜಿಲ್ಲೆಗಳ ಮುಖಂಡರ ಆತ್ಮಾವಲೋಕನ ಸಭೆಯ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ಗೃಹಲಕ್ಷ್ಮಿ ಕಾರ್ಯಕ್ರಮದಲ್ಲಿ ಮತ್ತೊಂದು ಗೊಂದಲ ತಂದಿಟ್ಟ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿ ಅವರು, ಅವರೊಬ್ಬ ಸಚಿವರಷ್ಟೇ ಅಲ್ಲ, ಬಹುತೇಕ ಎಲ್ಲ ಸಚಿವರಿಗೆ ಗ್ಯಾರಂಟಿಗಳ ಯಾವ ಗ್ಯಾರಂಟಿಯೂ ಇಲ್ಲ ಎಂದರು.ಇದು ಒಂದು ಕಾರ್ಯಕ್ರಮದ ಗೊಂದಲ ಅಲ್ಲ, ಐದು ಕಾರ್ಯಕ್ರಮಗಳ ಗೊಂದಲ. ಯಾರಿಗೂ ಯಾವ ಸ್ಪಷ್ಟತೆಯೂ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಗ್ಯಾರಂಟಿಗಳು ಲೇವಡಿಯ ವಸ್ತುವಾಗಿವೆ. ಮಾಧ್ಯಮಗಳಲ್ಲಿ ಕೂಡ ಇವುಗಳ ಬಗ್ಗೆ ಸಾಕಷ್ಟು ನಕಾರಾತ್ಮಕ ವರದಿಗಳು ಬರುತ್ತಿವೆ ಎಂದು ಕುಮಾರಸ್ವಾಮಿ ಅವರು ಉಲ್ಲೇಖ ಮಾಡಿದರು.
ಗೃಹಜ್ಯೋತಿ ಯೋಜನೆಯ ಬಗ್ಗೆ ಹೇಳುವುದೇ ಬೇಡ ಎನಿಸುತ್ತದೆ. ಏಕೆಂದರೆ, ಇಂಧನ ಇಲಾಖೆಯನ್ನು ಮುನ್ನಡೆಸುತ್ತಿರುವ ಸಚಿವರಾದ ಜಾರ್ಜ್ ಅವರಿಗೆ ಈ ಕಾರ್ಯಕ್ರಮ ಅರ್ಥ ಆಗಿಲ್ಲ. ಅವರು ತಾಳಮೇಳ ಇಲ್ಲದ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇಲಾಖೆಯ ಬಗ್ಗೆ ಸಂಪೂರ್ಣ ಮಾಹಿತಿ ಅವರಿಗೆ ಇಲ್ಲ, ಯಾಕೆ ಅಧಿಕಾರಿಗಳು ಅವರಿಗೆ ಮಾಹಿತಿ ನೀಡುತ್ತಿಲ್ಲವೇ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಗೃಹಲಕ್ಷ್ಮಿ, ಗೃಹಜ್ಯೋತಿ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಅತೀವ ಕುತೂಹಲ, ನಿರೀಕ್ಷೆ ಹುಟ್ಟು ಹಾಕಲಾಗಿತ್ತು. ಕೊನೆಪಕ್ಷ ಆ ಇಲಾಖೆಗಳನ್ನು ಮುನ್ನಡೆಸುವ ಇಬ್ಬರೂ ಸಚಿವರಿಗೆ ಈ ಕಾರ್ಯಕ್ರಮಗಳ ಬಗ್ಗೆ ಖಾತರಿ, ಸ್ಪಷ್ಟತೆ ಇಲ್ಲ ಎನ್ನುವುದು ಅವರ ಹೇಳಿಕೆಗಳಿಂದ ಗೊತ್ತಾಗುತ್ತದೆ. ಚುನಾವಣೆ ಪೂರ್ವದಲ್ಲಿ ಏನು ಘೋಷಣೆ ಮಾಡಿದ್ದರು ಎನ್ನುವುದು ನನಗೆ ಮಾತ್ರವಲ್ಲ ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಈಗ ನೋಡಿದರೆ ಸರಕಾರ ಸಬೂಬುಗಳ ಪಟ್ಟಿ ಮಾಡಿಕೊಂಡು ಕಾಲಹರಣ ಮಾಡುತ್ತಿದೆ, ಜನರ ನಂಬಿಕೆಯ ಹರಣ ಮಾಡುತ್ತಿದೆ ಎಂದು ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದರು.
ಇಂಧನ ಇಲಾಖೆಯಲ್ಲಿ ಏನೇನು ನಡೆಯುತ್ತಿದೆ, ನಡೆದಿದೆ ಎನ್ನುವ ಮಾಹಿತಿ ನನಗೂ ಇದೆ. ಹಿಂದೆ ಕಾಗೋಡು ತಿಮ್ಮಪ್ಪ ಅವರು ಸ್ಪೀಕರ್ ಆಗಿದ್ದರು. ಆಗ ಇಂಧನ ಇಲಾಖೆಯಲ್ಲಿ ನಡೆದ ಅಕ್ರಮಗಳ ತನಿಖೆಗೆ ಜಂಟಿ ಸದನ ಸಮಿತಿ ರಚನೆ ಮಾಡಲಾಯಿತು. ಮುಕ್ತ ಮಾರುಕಟ್ಟೆಯಲ್ಲಿ 2.30 ರೂಪಾಯಿಗೆ ಲಭ್ಯವಿದ್ದ ಸೋಲಾರ್ ವಿದ್ಯುತ್ತನ್ನು 9.50 ರೂಪಾಯಿ ಕೊಟ್ಟು ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ವಿಚಿತ್ರವೆಂದರೆ, ಆ ಸದನ ಸಮಿತಿ ಕಥೆ ಏನಾಯಿತು ಎಂದರೆ ಕುರಿ ಕಾಯಲು ತೊಳವನ್ನೆ ಬಿಟ್ಟಂತೆ ಆಯಿತು. ಈಗ ನಾನು ಕೇಳುತ್ತೇನೆ, ತಾಕತ್ತು ಇದ್ದರೆ ಈಗ ಆ ಒಪ್ಪಂದವನ್ನು ರದ್ದು ಮಾಡಿ ಎಂದು ರಾಜ್ಯ ಸರಕಾರಕ್ಕೆ ಮಾಜಿ ಮುಖ್ಯಮಂತ್ರಿ ಅವರು ಸವಾಲು ಹಾಕಿದರು.
ಈ ಒಪ್ಪಂದದ ಬಗ್ಗೆ ಸಾಕಷ್ಟು ದೂರು ಬಂದ ಬೆನ್ನಲ್ಲೇ ಅಂದು ನಾನು ವಿಧಾನಸಭೆಯಲ್ಲಿ ಚರ್ಚೆ ಮಾಡಿದೆ. 25 ವರ್ಷಕ್ಕೆ ಅಗ್ರಿಮೆಂಟ್ ಮಾಡಿದ್ದು ಸರಿಯಲ್ಲ ಎಂದು ನಾನೇ ನೇರವಾಗಿ ಹೇಳಿದೆ. ಸದನ ಸಮಿತಿಗೂ ನಾನು ಹೇಳಿದ್ದೆ. ಆದರೆ ಅಲ್ಲಿಗೆ ತೋಳವನ್ನೇ ತಂದರೆ ಹೇಗೆ.. ಕುರಿ ಕಾಯೋಕೆ ತೋಳ ತಂದ ಹಾಗಾಯ್ತು ಅಷ್ಟೆ ಎಂದು ಅವರು ಹೇಳಿದರು.
2013-18ರಲ್ಲಿ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಅಕ್ರಮ ಅದಿರು ಸಾಗಣೆ ಕುರಿತಂತೆ ಸದನ ಸಮಿತಿ ರಚನೆ ಮಾಡಲಾಗಿತ್ತು. ಸುದೀರ್ಘ ಪರಿಶೀಲನೆ ನಂತರ ಹೆಚ್.ಕೆ.ಪಾಟೀಲ್ ಅವರು ಒಂದು ವರದಿ ನೀಡಿದ್ದರು. ಬಿಜೆಪಿಯನ್ನು 40 ಪರ್ಸೆಂಟ್ ಪಾರ್ಟಿ ಎಂದವರು ಈ ವರದಿಯನ್ನು ಬಹಿರಂಗಪಡಿಸಲಿ ಎಂದು ಮಾಜಿ ಮುಖ್ಯಮಂತ್ರಿಗಳು ಒತ್ತಾಯ ಮಾಡಿದರು.
ಆ ವರದಿಯಲ್ಲಿ ಬೆಚ್ಚಿ ಬೀಳಿಸುವ ಅಂಶಗಳಿವೆ. 35 ಕೋಟಿ ಟನ್ ಅದಿರು ಅಕ್ರಮವಾಗಿ ರಫ್ತಾಗಿದೆ ಎನ್ನುವುದನ್ನು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಆ ಅದಿರಿನ ಮೌಲ್ಯ 1.43 ಲಕ್ಷ ಕೋಟಿ ರೂಪಾಯಿ! ಅಂದು ಹೆಚ್.ಕೆ.ಪಾಟೀಲ್ ಅವರು ಕೊಟ್ಟ ಈ ವರದಿಯಲ್ಲಿ ಈ ವಿಚಾರ ಅಡಗಿದೆ. ಈ ವರದಿಯನ್ನು ಅಂದು ಮುಖ್ಯಮಂತ್ರಿಗಳು ತಮ್ಮ ಸೀಟ್ ಕೆಳಗೆ ಇಟ್ಟುಕೊಂಡಿರಲ್ಲ, ಅದನ್ನು ಈಗ ಬಹಿರಂಗ ಮಾಡಿ. ಅದನ್ನು ತಿಂದವರಿಂದ ಹೊರಗೆ ಕಕ್ಕಿಸಿದರೆ ಈ ಗ್ಯಾರಂಟಿಗಳಿಗೆ ಹಣ ಕೊಡಬಹುದು ಎಂದು ಮಾಜಿ ಮುಖ್ಯಮಂತ್ರಿಗಳು ಸ್ಪಷ್ಟ ಮಾತುಗಳಲ್ಲಿ ಹೇಳಿದರು.