ಬೆಂಗಳೂರು: ಬರಗಾಲ ಬರಲಿ ಎಂದು ರೈತರು ಕಾಯ್ತಿದ್ದಾರೆ ಎಂಬ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ಈಗ ಆಡಳಿತಾರೂಢ ಕಾಂಗ್ರೆಸ್ ಮುಳ್ಳಾಗಿದೆ.
ಸಚಿವರ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ರಾಜ್ಯ ಸರ್ಕಾರ ಪದೇ ಪದೇ ರೈತರಿಗೆ ಅವಮಾನ ಮಾಡುತ್ತಿರುವುದಕ್ಕೆ ಸಚಿವರ ಈ ಹೇಳಿಕೆಯೇ ಸಾಕ್ಷಿ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಸರ್ಕಾರ ಕರೆಂಟು, ನೀರು, ಗೊಬ್ಬರ ಎಲ್ಲಾ ಫ್ರೀ ಆಗಿ ಕೊಟ್ಟಿದೆ. ರೈತರು ಬರಗಾಲ ಬರಲಿ ಎಂದು ಕಾಯ್ತಿದ್ದಾರೆ. ಬರಗಾಲ ಎಂದರೆ ರೈತರು ಸಾಲ ಮನ್ನಾ ಆಗುತ್ತದೆ ಎಂದು ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಆದರೆ ಕಷ್ಟದಲ್ಲಿರುವಾಗ ಸಾಲಮನ್ನಾ ಹೇಗೆ ಸಾಧ‍್ಯ? ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ರೈತರು ಬೆಳೆ ಬೆಳೆಯುವುದರತ್ತ ಗಮನ ಹರಿಸಬೇಕು ಎಂದು ಹಗುರವಾಗಿ ಮಾತನಾಡಿದ್ದರು.
ಈ ವಿಚಾರ ಈಗ ಕಾಂಗ್ರೆಸ್ ಗೇ ಮುಳುವಾಗಿದೆ. ಸಚಿವರ ಹೇಳಿಕೆಯಿಂದ ರಾಜ್ಯ ಸರ್ಕಾರಕ್ಕೂ ಮುಜುಗರವಾಗಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ಆರ್. ಅಶೋಕ್ ಇಂತಹ ದುರಹಂಕಾರ ಒಳ್ಳೆಯದಲ್ಲ. ಈ ಸರ್ಕಾರಕ್ಕೆ ರೈತರ ಶಾಪ ತಟ್ಟಲಿದೆ. ಇದು ಹೆಚ್ಚು ದಿನ ಉಳಿಯಲ್ಲ ಎಂದಿದ್ದಾರೆ.