ಖಾಸಗಿ ಸಾರಿಗೆ ಉದ್ಯಮದ ಸಮಸ್ಯೆ ನಿವಾರಿಸಲು ಆಗಸ್ಟ್ 21ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದಿದ್ದ ಸಭೆಯನ್ನು ಬಹಿಷ್ಕರಿಸಿದ್ದ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟವು ಸೆ.11ರಂದು ಬೆಂಗಳೂರು ಬಂದ್‌ಗೆ ಕರೆ ನೀಡಿರುವುದು ಸರಿಯಲ್ಲ. ಹೀಗಾಗಿ ಮತ್ತೆ ಅವರನ್ನು ಮಾತುಕತೆಗೆ ಕರೆಯುವ ಪ್ರಶ್ನೆಯೇ ಇಲ್ಲ. ಬದಲಿಗೆ ಬಂದ್ ವೇಳೆ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗದಂತೆ ಸರ್ಕಾರದಿಂದ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಈಗ ಮತ್ತೆ ಒಕ್ಕೂಟವು ಬೆಂಗಳೂರಿಗೆ ಬಂದ್ ಕರೆ ನೀಡಿದೆ. ಆದರೆ, ಒಕ್ಕೂಟಕ್ಕೆ ಬಂದ್ ಹಿಂಪಡೆಯುವಂತೆ ಕೋರುವುದಿಲ್ಲ. ಬದಲಿಗೆ ಬೇಡಿಕೆ ಈಡೇರಿಸಿಕೊಳ್ಳುವ ಮನಸ್ಸಿದ್ದರೆ, ನನ್ನ ಕಚೇರಿಗೆ ಬರಬಹುದು. ಆದರೆ, ನಾನು ಸಭೆಗೆ ಆಹ್ವಾನಿಸುವುದಿಲ್ಲ. ಸೆ. 11ರಂದು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಾರಿಗೆ ಸಮಸ್ಯೆ ಉದ್ಭವವಾಗದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.