ಪಾಕಿಸ್ತಾನ ಪರವಾಗಿ ಹೇಳಿಕೆ ನೀಡಿರುವ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಪರ ಬ್ಯಾಟಿಂಗ್ ಮಾಡಿರುವ ಕೃಷಿ ಖಾತೆ ಸಚಿವ ಕೃಷ್ಣಭೈರೇಗೌಡ, ಪಾಕಿಸ್ತಾನವನ್ನು ನರಕ ಎನ್ನುವ ಬಿಜೆಪಿ ಹಾಗೂ ಆರೆಸ್ಸೆಸ್‌ನವರು ಹಿಂದೂ ಧರ್ಮದ ಮೂಲ ಸ್ಥಾನ ನರಕವೆಂದು ಒಪ್ಪಿಕೊಳ್ಳುತ್ತೀರಾ ಎಂದು ಸವಾಲ್ ಹಾಕಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಆರೆಸ್ಸೆಸ್‌ನವರು ಅಖಂಡ ಭಾರತದ ಕುರಿತು ಮಾತನಾಡುತ್ತಾರೆ. ಹಾಗಾದರೇ ಹಿಂದೂ ಪಾಕಿಸ್ತಾನ ಏಲ್ಲಿದೆ? ಅಖಂಡ ಭಾರತದಲ್ಲೇ ಪಾಕಿಸ್ತಾನ ಸೇರಿಕೊಂಡಿದೆ ಎಂದು ಹೇಳಿದರು.
ಸಿಂಧೂ ನದಿಯ ಕಣಿವೆಯಿಂದ ಹಿಂದೂ ಎಂಬ ಪದ ಬಂದಿರುವುದು. ಸಿಂಧೂ ಕಣಿವೆ ಈಗಿನ ಪಾಕಿಸ್ತಾನದಲ್ಲಿದೆ. ವೇದ ಉಪನಿಷತ್ತುಗಳು ಅಲ್ಲೆ ಹುಟ್ಟಿಕೊಂಡಿರುವುದು ಎಂದು ತಿಳಿಸಿದರು.
ಹಿಂದೂ ಧರ್ಮಕ್ಕೆ 3500 ವರ್ಷಗಳ ಇತಿಹಾಸವಿದೆ. ಆದರೆ, ಭಾರತದಿಂದ ಪಾಕಿಸ್ತಾನ ಬೇರ್ಪಟ್ಟು ಕೇವಲ 50 ವರ್ಷಗಳಾಗಿದೆ. ಹಾಗಾದರೇ 50 ವರ್ಷಗಳಲ್ಲಿ ಪಾಕಿಸ್ತಾನ ನರಕವಾಯ್ತೇ ಎಂದು ಪ್ರಶ್ನಿಸಿದ್ದಾರೆ.
ಪಾಕಿಸ್ತಾನ ಮಾಡಬಾರದ ಕೆಲಸ ಮಾಡಿದೆ ನಿಜ, ಅದರಲ್ಲಿ ಅನುಮಾನವಿಲ್ಲ. ಭಯೋತ್ಪಾದನೆಯನ್ನು ಹುಟ್ಟಿಹಾಕಿರುವ ಪಾಕಿಸ್ತಾನ ಈಗ ಅನುಭವಿಸುತ್ತಿದೆ. ಪಾಕ್‌ನಲ್ಲಿ ಒಳ್ಳೆಯ ಜನರು ಇದ್ದಾರೆ. ವೋಟಿಗಾಗಿ ರಾಜಕಾರಣ ಮಾಡುತ್ತಿರುವ ಬಿಜೆಪಿಯವರಿಗೆ ಹಿಂದೂಗಳ ಬಗ್ಗೆ ನಿಜವಾದ ಕಾಳಜಿ ಇಲ್ಲ. ಹಿಂದೂ ಮೂಲವಾಗಿರುವ ಪಾಕಿಸ್ತಾನವನ್ನು ಗೌರವಿಸುವುದನ್ನು ಕಲಿಯೋಣ ಎಂದು ಕೃಷಿ ಖಾತೆ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ