ರಂಗಭೂಮಿಯ ಹಿರಿಯ ಜೀವಿ, ರಂಗ ನಿರಂತರ ಕಾರ್ಯಾಧ್ಯಕ್ಷರಾಗಿದ್ದ ಡಿ.ಕೆ.ಚೌಟ (82) ಜಯದೇವ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದು, ಅವರ ಅಗಲಿಕೆಗೆ ಜಲ ಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
"ಹಿರಿಯ ರಂಗ ಸಂಘಟಕ ಡಿ.ಕೆ ಚೌಟ ಅವರ ನಿಧನವಾರ್ತೆ ಬೇಸರ ತಂದಿದೆ. ಉದ್ಯಮಿಯಾಗಿದ್ದರೂ ರಂಗಭೂಮಿ, ಸಾಹಿತ್ಯ ಹಾಗೂ ಕಲಾಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದ ಚೌಟ ಅವರು ವಿಶೇಷ ವ್ಯಕ್ತಿತ್ವ ಹೊಂದಿದ್ದವರು. 'ಆನಂದ ಕೃಷ್ಣ' ಎಂಬ ಕಾವ್ಯನಾಮದಿಂದ ಖ್ಯಾತಿ ಪಡೆದಿದ್ದ ಅವರು, 'ಕರಿಯವಜ್ಜೆರೆನ ಕಥೆಕ್ಕುಲು', 'ಫ್ಲಿತಿಪಥಿಗಡಸು', 'ಪಟ್ಟು ಪಜ್ಜೆಲು', 'ದರ್ಮೆಟ್ಟಿಮಾಯೆ', 'ಉರಿ ಉಷ್ಣದ ಮಾಯೆ', 'ಮಿಟ್ಟಬೈಲು ಯಮುನಕ್ಕ' ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದು, ತುಳು ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ಅವರ 'ಫ್ಲಿತಿಪಥಿಗಡಸು' ನಾಟಕ ರಚನೆಗೆ ಕರ್ನಾಟಕ ಸರ್ಕಾರ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ಸಾಹಿತ್ಯ ಸೇವೆಗೆ ಗೌರವ ಡಾಕ್ಟರೇಟ್ ಕೂಡ ಲಭಿಸಿದೆ. ಅವರು ಸಾಹಿತ್ಯ ರಚನೆ ಅಷ್ಟೇ ಅಲ್ಲದೆ ರಂಗಭೂಮಿಯಲ್ಲೂ ತೊಡಗಿಸಿಕೊಂಡು ಹೆಸರು ಮಾಡಿದ್ದರು ಎಂದು ಸಚಿವ ಶಿವಕುಮಾರ್ ಗುಣಗಾನ ಮಾಡಿದ್ದಾರೆ.
ಚಿತ್ರಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿರುವ ಚೌಟ ಅವರ ನಿಧನ ನಮ್ಮ ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರಕ್ಕೆ ದೊಡ್ಡ ನಷ್ಟ. ಅವರ ಅಗಲಿಕೆಯ ನೋವನ್ನು ಅವರ ಕುಟುಂಬ ಸದಸ್ಯರು, ಬಂಧು-ಬಳಗದವರಿಗೆ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ಸಂತಾಪಸೂಚಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.