ಒಂದು ಕಡೆ ಮುಗಿಲು ಮುಟ್ಟಿದ ಆಕ್ರೋಶ ರೈತರಿಂದ ವ್ಯಕ್ತವಾಗುತ್ತಿದ್ದರೆ, ಇನ್ನೊಂದು ಕಡೆ ಹಗಲು ರಾತ್ರಿ ಪ್ರತಿಭಟನೆ ನಡೆಸಲಾಗುತ್ತಿದೆ. ಏತನ್ಮಧ್ಯೆ ಸಾವಿರಾರು ಕಬ್ಬು ತುಂಬಿದ ವಾಹನಗಳನ್ನು ತಡೆದು ರೈತರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ.
ರೈತರ ಪ್ರತಿಭಟನೆ ನಡುವೆ ಸಕ್ಕರೆ ಕಾರ್ಖಾನೆಗಳು ಕಾರ್ಯಾರಂಭ ಮಾಡಿವೆ. ತಮ್ಮ ಹಿಂದಿನ ಘೋಷಿತ ಬೆಲೆ ಕೊಡುವವರೆಗೂ ಕಾರ್ಖಾನೆಗಳು ಆರಂಭವಾಗಲು ಬಿಡುವದಿಲ್ಲ ಅಂತ ಪಟ್ಟು ಹಿಡಿದ ರೈತರಿಂದ ರಸ್ತೆಯಲ್ಲಿ ಅಡುಗೆ ಅಲ್ಲೇ ಊಟ ಮತ್ತು ಅಹೋರಾತ್ರಿ ಧರಣಿ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಮುರಗುಂಡಿ ಗ್ರಾಮದಲ್ಲಿ ನಡೆಯುತ್ತಿದೆ.
ಕಳೆದ ಒಂದು ವಾರದಿಂದ ಕಾರ್ಖಾನೆ ಮಾಲೀಕರು ಮತ್ತು ರೈತರ ನಡುವಿನ ಹಗ್ಗ ಜಗ್ಗಾಟ ನಿಲ್ಲುವ ಲಕ್ಷಣಗಳು ಮಾತ್ರ ಕಾಣುತ್ತಿಲ್ಲ. ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚುವರಿ ಹಣ ಕೊಡ್ತೀವಿ ಅಂದ ಕಾರ್ಖಾನೆ ಮಾಲೀಕರು ಎರಡನೇ ಹಂತದ ಹಣವನ್ನು ರೈತರಿಗೆ ನೀಡದೆ ಬಾಕಿ ಉಳಿಸಿಕೊಂಡಿವೆ. ಹೀಗಾಗಿ ಸದ್ಯ ರೈತರ ಆಕ್ರೋಶ ಮುಗಿಲು ಮುಟ್ಟುವಂತಾಗಿದ್ದು ರೈತರ ಅಳಲು ಮಾತ್ರ ಕಾರ್ಖಾನೆ ಮಾಲೀಕರಿಗೆ ಕೇಳುತ್ತಿಲ್ಲ.
ಇದರಿಂದ ರೈತರು ಅಲ್ಲಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಬಾಕಿ ಹಣ ಕೊಡುವವರೆಗೆ ಕಬ್ಬು ಕಾರ್ಖಾನೆ ತಲುಪಲು ಬಿಡುವದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಎರಡ್ಮೂರು ಕಿಲೋಮೀಟರ್ ಗಟ್ಟಲೆ ವಾಹನಗಳು ನಿಲ್ಲುವಂತಾಗಿವೆ.
ಅಷ್ಟೇ ಅಲ್ಲದೇ ಕಳೆದ ಹದಿನೇಳು ದಿನಗಳಿಂದ ಉಗಾರದಲ್ಲಿ ಸೇತಕರಿ ಸಂಘಟನೆ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಸೇರಿದಂತೆ ಹಲವು ಸಂಘಟನೆಗಳು ರಸ್ತೆಗೆ ಇಳಿದು ಹೋರಾಟ ಮಾಡುತ್ತಿವೆ. ಕಾರ್ಖಾನೆ ಮಾಲೀಕರು ಮಾತ್ರ ಎಪ್ ಆರ್ ಪಿ ದರ ಹೊರತು ಪಡಿಸಿ ಹೆಚ್ಚಿನ ಹಣ ನೀಡಲು ಮುಂದಾಗದೆ ಇರುವದು ಸದ್ಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ.