ನೈಋತ್ಯ ಮುಂಗಾರು ಮಾರುತಗಳು ಇಡೀ ರಾಜ್ಯವನ್ನು ಆವರಿಸಿದಂತಾಗಿದೆ. ಮೇ 31ಕ್ಕೆ ರಾಜ್ಯದ ಕರಾವಳಿಗೆ ಕಾಲಿಟ್ಟಿದ್ದ ಮುಂಗಾರು ಮಾರುತಗಳು ಸುಮಾರು ಎರಡು ವಾರದ ಬಳಿಕ ರಾಜ್ಯವನ್ನು ಆವರಿಸಿದೆ. ಮುಂಗಾರು ಋುತುವಿನ ಆರಂಭದಲ್ಲಿ ಭರ್ಜರಿ ಮಳೆಯಾಗುವ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯ ತೀವ್ರ ಕೊರತೆ ಕಾಡಿದೆ. ಜೂನ್ 16ಕ್ಕೆ ಮುಂಗಾರು ಮಾರುತ ಪೂರ್ಣವಾಗಿ ರಾಜ್ಯವನ್ನು ಆವರಿಸಿದ್ದರೂ ದಕ್ಷಿಣ ಒಳನಾಡಿನಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಕಳೆದ 17 ದಿನಗಳಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಶೇ.32 ಮಳೆಯ ಕೊರತೆಯಾಗಿದೆ. ಆದರೆ ಮುಂದಿನ ಮೂರ್ನಾಲ್ಕು ದಿನದಲ್ಲಿ ಮುಂಗಾರು ಚುರುಕಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.