ಮಂಡ್ಯ : ಮಂಡ್ಯ ರಾಜಕೀಯದಲ್ಲಿ ನಡೆಯುತ್ತಿರುವ ಘಟನೆಗಳು ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಇದೀಗ ಮಂಡ್ಯ ಕೈ ಕಾರ್ಯಕರ್ತರು ಪಕ್ಷದ ನಾಯಕರ ವಿರುದ್ಧವೇ ತಿರುಗಿಬಿದ್ದಿದ್ದಾರೆ.
ಹೌದು. ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೀಳಿಯುತ್ತಿರುವ ನಿಖಿಲ್ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ್ದ ಮಂಡ್ಯದ ಕೈ ಕಾರ್ಯಕರ್ತರು ಇದೀಗ, ಕಾಂಗ್ರೆಸ್ನ ಮಾಜಿ ಸಚಿವ ಅಂಬರೀಶ್ ಅವರ ಪತ್ನಿ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದರಿಂದ ಆಕೆಗೆ ಬೆಂಬಲ ನೀಡಿ, ಕಾಂಗ್ರೆಸ್ ಬಾವುಟ ಹಿಡಿದು ಪ್ರಚಾರದಲ್ಲಿ ಸಾಥ್ ನೀಡುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ, ಪಕ್ಷೇತರ ಅಭ್ಯರ್ಥಿ ಪರ ಕಾಂಗ್ರೆಸ್ ಬಾವುಟ ಹಿಡಿದು ಪ್ರಚಾರ ಮಾಡುವ ಕಾರ್ಯಕರ್ತರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು. ಅಂಥವರು ಪಕ್ಷ ಬಿಟ್ಟು ಹೋಗಬಹುದು. ಬೇರೆ ಪಕ್ಷದ ಅಭ್ಯರ್ಥಿ ಜೊತೆಗೆ ನಮ್ಮ ಪಕ್ಷದ ಚಿಹ್ನೆ ಕಾಣಿಸಿಕೊಳ್ಳಬಾರದು. ಈ ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದೇವೆ ಎಂದು ಖಡಕ್ ಸೂಚನೆ ನೀಡಿದ್ದರು.
ಇದರಿಂದ ರೊಚ್ಚಿಗೆದ್ದ ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರು ಮೈತ್ರಿ ನಾಯಕರ ವಿರುದ್ಧವೇ ತಿರುಗಿ ಬಿದ್ದಿದ್ದು,ಇಂದು ಬಹಿರಂಗವಾಗಿಯೇ ಬಾವುಟ ಹಿಡಿದು ಸುಮಾಲತಾ ಪರ ಪ್ರಚಾರ ನಡೆಸಲು ಮುಂದಾಗಿದ್ದಾರೆ. ಅಲ್ಲದೇ ನಮ್ಮ ವಿರುದ್ಧ ಕ್ರಮಕ್ಕೆ ಮುಂದಾದರೆ ಪಕ್ಷ ತೊರೆಯುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಹೈಕಮಾಂಡ್ ಗೂ ತಲೆನೋವಾಗಿ ಪರಿಣಮಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.